ಶಿವಮೊಗ್ಗ: ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಬಗ್ಗೆ NIA ತನಿಖೆ ನಡೆಸಬೇಕೆಂದು ಸಚಿವ ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದ್ದಾರೆ.
ಸತ್ಯಾಸತ್ಯತೆ ಹೊರ ಬರಬೇಕಾದರೆ ರಾಷ್ಟ್ರೀಯ ತನಿಖಾ ದಳದ ಮೂಲಕ ತನಿಖೆ ನಡೆಸಬೇಕು. ಶಿವಮೊಗ್ಗದ ಇತಿಹಾಸದಲ್ಲಿಯೇ ಈ ರೀತಿ ಘಟನೆ ನಡೆದಿರಲಿಲ್ಲ. ನಮ್ಮ ಒಬ್ಬ ಹಿಂದೂ ಕಾರ್ಯಕರ್ತನ ಕಗ್ಗೊಲೆ ಆಗಿದ್ದು, ಇದರ ಬಗ್ಗೆ ಎನ್ಐಎ ಮೂಲಕ ತನಿಖೆ ನಡೆಸಬೇಕೆಂದು ಆಗ್ರಹಿಸುತ್ತೇನೆ. ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವಿ ಮಾಡುತ್ತೇನೆ ಎಂದರು.
ಹರ್ಷ ಅಂತ್ಯಕ್ರಿಯೆ ಮೆರವಣಿಗೆಯಲ್ಲಿ ಹೊರಗಿನವರು ಬಂದು ಘೋಷಣೆ ಕೂಗಿ, ಗಲಭೆ ನಡೆಸಿದ್ದಾರೆ. ಪೋಲಿಸ್ ಇಲಾಖೆ, ಸಂಘಟಕರ ಹಿಡಿತ ತಪ್ಪಿ ಹೋಗಿ ಗಲಭೆ ನಡೆಸಿದ್ದಾರೆ ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ. ಉಳಿದವರನ್ನು ಕೂಡ ಬಂಧಿಸಬೇಕು ಎಂದು ಒತ್ತಾಯಿಸಿದರಲ್ಲದೇ, ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿಕೆ ಹಾಸ್ಯಾಸ್ಪದವಾಗಿದೆ. ಅವರು ತಾವು ಕಾಂಗ್ರೆಸ್ ನಲ್ಲಿದ್ದೇನೆ ಎನ್ನುವುದನ್ನು ತೋರಿಸಿಕೊಳ್ಳಲು ತಮ್ಮ ಮೇಲೆ ವಿನಾಕಾರಣ ಆರೋಪ ಮಾಡಿದ್ದಾರೆ ಎಂದು ದೂರಿದರು.