ಭಿಕ್ಷುಕರು ಭಿಕ್ಷೆ ಬೇಡಲು ಬಂದಾಗ ಅವರಿಂದ ತಪ್ಪಿಸಿಕೊಳ್ಳಲು ಅನೇಕರು ಹೇಳುವ ಸಾಮಾನ್ಯವಾದ ಸುಳ್ಳು ಅಂದರೆ ಚಿಲ್ಲರೆ ಇಲ್ಲ ಎಂದಾಗಿದೆ. ಆದರೆ ಭಿಕ್ಷೆ ನೀಡುವ ವೇಳೆಯಲ್ಲಿ ಉಂಟಾಗುವ ಈ ಸಮಸ್ಯೆಯನ್ನೂ ಮಧ್ಯಪ್ರದೇಶದ ಚಿಂದ್ವಾರದಲ್ಲಿ ಭಿಕ್ಷುಕನೊಬ್ಬನು ಬಗೆಹರಿಸಿದ್ದಾನೆ.
ಚಿಂದ್ವಾರದ ಹೇಮಂತ್ ಸೂರ್ಯವಂಶಿ ಎಂಬ ಭಿಕ್ಷುಕ ಹೈ ಟೆಕ್ ರೀತಿಯಲ್ಲಿ ಭಿಕ್ಷೆ ಬೇಡುತ್ತಿದ್ದಾರೆ. ಹೌದು..! ಭಿಕ್ಷುಕ ಹೇಮಂತ್ ಸೂರ್ಯವಂಶಿ ಸ್ಕ್ಯಾನ್ ಕೋಡ್ ಮೂಲಕ ಡಿಜಿಟಲ್ ಮೋಡ್ನಲ್ಲಿ ಭಿಕ್ಷೆ ಬೇಡುತ್ತಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಹೇಮಂತ್ ಸೂರ್ಯವಂಶಿ, ಭಿಕ್ಷೆಯನ್ನು ಕೇಳಿದಾಗ ನಮ್ಮ ಬಳಿ ಚಿಲ್ಲರೆ ಇಲ್ಲ ಎಂದು ಹೇಳುತ್ತಾರೆ. ಈ ಸಮಸ್ಯೆ ಉಂಟಾಗಬಾರದು ಎಂಬ ಕಾರಣಕ್ಕೆ ಡಿಜಿಟಲ್ ತಂತ್ರಜ್ಞಾನ ಬಳಸಿ ಬಾರ್ ಕೋಡ್ ಮೂಲಕ ಭಿಕ್ಷೆ ಬೇಡುತ್ತಿದ್ದೇನೆ ಎಂದು ಹೇಳಿದರು.
ಹೇಮಂತ್ ಸೂರ್ಯವಂಶಿ ನಗರಸಭೆಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಕಳೆದುಕೊಂಡು ಹಲವು ದಿನಗಳಿಂದ ಖಿನ್ನತೆಗೆ ಒಳಗಾಗಿದ್ದ ಇವರು ಈಗ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಹೇಮಂತ್ ಮಾನಸಿಕ ಸ್ಥಿತಿಯೂ ಹದಗೆಟ್ಟಿದೆ. ಹೇಮಂತ್ ಸೂರ್ಯವಂಶಿಯನ್ನು ಹೇಮಂತ್ ಬಾಬಾ ಎಂಬ ಹೆಸರಿನಿಂದ ಜನರು ಕರೆಯುತ್ತಾರೆ.