ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ಗಾದೆ ಮಾತು ನಮ್ಮಲ್ಲಿದೆ. ಏಕೆಂದರೆ ಇವೆರಡೂ ಕಷ್ಟದ ಕೆಲಸಗಳು. ಸಾಕಷ್ಟು ಹಣವನ್ನು ಖರ್ಚು ಮಾಡೋದ್ರ ಜೊತೆಗೆ ಆ ಜವಾಬ್ದಾರಿಗಳನ್ನು ನಿಭಾಯಿಸೋದು ಸುಲಭದ ಮಾತಲ್ಲ.
ಆದರೆ ಇಷ್ಟೆಲ್ಲ ಮಾಡಿದ ಬಳಿಕ ಕಲ್ಯಾಣ ಮಂಟಪದಲ್ಲಿ ಕ್ಷುಲ್ಲಕ ಕಾರಣಕ್ಕೆ ಮದುವೆಯೇ ನಿಂತು ಹೋದ ಸಾಕಷ್ಟು ಉದಾಹರಣೆಗಳನ್ನು ನಾವು ಕೇಳಿರ್ತೇವೆ. ಇಂತಹದ್ದೇ ಒಂದು ಘಟನೆಯು ಬಿಹಾರದ ಪುರ್ನಿಯಾದಲ್ಲಿ ಬೆಳಕಿಗೆ ಬಂದಿದ್ದು ವರನೊಬ್ಬ ತನ್ನ ಕುಟುಂಬಕ್ಕೆ ತಡವಾಗಿ ಊಟ ಬಡಿಸಿದ್ದಾರೆ ಎಂಬ ಒಂದೇ ಕಾರಣಕ್ಕೆ ಮದುವೆಯಾಗಲು ನಿರಾಕರಿಸಿದ್ದಾನೆ. ಪೂರ್ನಿಯಾದ ಮೊಹಾನಿ ಪಂಚಾಯತ್ ವ್ಯಾಪ್ತಿಯ ಬಟೌನಾ ಗ್ರಾಮದಲ್ಲಿ ಈ ವಿಲಕ್ಷಣ ಘಟನೆಯು ನಡೆದಿದೆ.
ಅಮರಿ ಕುಕ್ರೌನ್ನ ನಿವಾಸಿಯಾದ ವರ ರಾಜಕುಮಾರ್ ಓರಾನ್ ನಿಗದಿತ ಸಮಯಕ್ಕೆ ದಿಬ್ಬಣ ಸಮೇತ ಮದುವೆ ಮಂಟಪಕ್ಕೆ ಆಗಮಿಸಿದ್ದರು. ವಿವಾಹ ವಿಧಿ ವಿಧಾನಗಳು ನಡೆಯುತ್ತಿದ್ದ ವೇಳೆಯಲ್ಲಿ ವರನ ಸಂಬಂಧಿಗಳಿಗೆ ಊಟ ಬಡಿಸಲು ವಿಳಂಬವಾಗಿತ್ತು, ಇದು ವರನ ತಂದೆಯ ಆಕ್ರೋಶಕ್ಕೆ ಕಾರಣವಾಯ್ತು. ವರನ ತಂದೆ ಮದುವೆಯನ್ನು ಮುಂದುವರಿಸುವುದನ್ನು ತಡೆಯುವ ಮೂಲಕ ಈ ಸಂಬಂಧವನ್ನು ಕೊನೆಗೊಳಿಸಿದರು.
ಈ ವೇಳೆ ಸ್ಥಳೀಯರು ಹಾಗೂ ಪಂಚಾಯಿತಿಯವರು ಮಧ್ಯ ಪ್ರವೇಶಿಸಿ ಎರಡು ಕಡೆಯವರ ನಡುವೆ ಸಮಸ್ಯೆ ಬಗೆಹರಿಸಲು ಯತ್ನಿಸಿದರು. ಆದರೆ, ಅಷ್ಟೊತ್ತಿಗಾಗಲೇ ವರ ಸ್ಥಳದಿಂದ ಪಲಾಯನ ಮಾಡಿದ್ದರಿಂದ ಮದುವೆಯನ್ನು ನಿಲ್ಲಿಸಬೇಕಾಯಿತು. ಈ ನಡುವೆ, ವರನ ತಂದೆ ವಧುವಿನ ಕುಟುಂಬಕ್ಕೆ ಮದುವೆಯಲ್ಲಿ ಅಡುಗೆ ಮಾಡಲು ತಗಲುವ ವೆಚ್ಚವನ್ನು, ಬೈಕ್ ಮತ್ತು ವರನಿಗೆ ವಧು ಕಡೆಯವರು ನೀಡಿದ್ದ ಇತರ ಎಲ್ಲಾ ಉಡುಗೊರೆಗಳನ್ನು ಮರಳಿಸಿದರು.