ಬೆಂಗಳೂರು: ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣ ಕುರಿತು ತನಿಖೆ ನಡೆಯುತ್ತಿದೆ. ಆಗಲೇ ಸಚಿವ ಈಶ್ವರಪ್ಪ ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಮತ್ತಷ್ಟು ಶಾಂತಿ ಕದಡುವ ಯತ್ನ ನಡೆಸುವುದು ಸರಿಯಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಕೆ.ಹರಿಪ್ರಸಾದ್, ಈಶ್ವರಪ್ಪ ಹೇಳಿಕೆ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ. ಈಗಾಗಲೇ ನಾವು ಸಚಿವ ಈಶ್ವರಪ್ಪ ರಾಜಿನಾಮೆಗೆ ಆಗ್ರಹಿಸಿ ಧರಣಿ ನಡೆಸುತ್ತಿದ್ದೇವೆ. ಸದನದಲ್ಲಿಯೂ ಪ್ರತಿಭಟನೆ ಮುಂದುವರೆಸಿದ್ದೇವೆ. ಇದೆಲ್ಲದರಿಂದ ಗಮನ ಬೇರೆಡೆ ಸೆಳೆಯಲು ಇದೀಗ ಡಿ.ಕೆ.ಶಿವಕುಮಾರ್ ಹೇಳಿಕೆಯಿಂದ ಪ್ರೇರಣೆಗೊಂಡು ಭಜರಂಗದಳ ಕಾರ್ಯಕರ್ತನ ಹತ್ಯೆ ಎಂಬ ಆರೋಪ ಮಾಡುತ್ತಿದ್ದಾರೆ. ಈ ಮೂಲಕ ಉದ್ದೇಶಪೂರ್ವಕವಾಗಿ ಶಾಂತಿ ಕದಡಲು ಯತ್ನಿಸಿದ್ದಾರೆ ಎಂದು ಗುಡುಗಿದರು.
BIG BREAKING: ಭಜರಂಗದಳ ಕಾರ್ಯಕರ್ತನ ಹತ್ಯೆ ಕೇಸ್; ಓರ್ವ ಆರೋಪಿ ಪೊಲೀಸ್ ವಶಕ್ಕೆ
ಇನ್ನು ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಗೃಹ ಸಚಿವರೇ ಹೇಳುತ್ತಿದ್ದಾರೆ. ಆರೋಪಿಗಳನ್ನು ಬಂಧಿಸುವ ಕೆಲಸವೂ ನಡೆಯುತ್ತಿದೆ. ತನಿಖೆ ಈಗಷ್ಟೇ ಆರಂಭವಾಗಿರುವಾಗಲೇ ಮುಸ್ಲೀಂ ಗೂಂಡಾಗಳೇ ಕೊಲೆ ಮಾಡಿದ್ದಾರೆ ಎಂದು ಹೇಳಿಕೆ ಕೊಟ್ಟುರುವುದು ಸರಿಯಲ್ಲ. ಈಶ್ವರಪ್ಪನವರ ಹೇಳಿಕೆ ಬಾಲಿಶ ಹಾಗೂ ಪ್ರಚೋದನಕಾರಿಯಾಗಿದೆ. ಮೊದಲು ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.