ಬೆಂಗಳೂರು: ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಧರಣಿಗೆ ತಿರುಗೇಟು ನೀಡಿರುವ ಕಂದಾಯ ಸಚಿವ ಆರ್.ಅಶೋಕ್, ಕಾಂಗ್ರೆಸ್ ನ ಎಲ್ಲರೂ ಬಿಜೆಪಿಗೆ ಬಂದು ಬಿಡಲಿ, ನಂತರ ಬಿಜೆಪಿಗೆ ಸಲಹೆ ನೀಡಲಿ ಎಂದು ಟಾಂಗ್ ನೀಡಿದ್ದಾರೆ.
ಉಡುಪಿಯ ಕೆಂಜೂರಿನಲ್ಲಿ ಮಾತನಾಡಿದ ಸಚಿವರು, ಕಲಾಪ ನಡೆಸಲು ಬಿಡದೇ ಸದನದಲ್ಲಿ ಧರಣಿ ನಡೆಸುತ್ತಿರುವ ಕಾಂಗ್ರೆಸ್ ನಾಯಕರಿಗೆ ನಾವೇ ಕಿವಿ ಹಿಂಡಬೇಕಾದ ಸ್ಥಿತಿ ಬಂದಿದೆ. ಸದನದಲ್ಲಿ ಜನರ ಸಮಸ್ಯೆಗಳ ಬಗ್ಗೆ, ಅಭಿವೃದ್ಧಿ ವಿಚಾರವಾಗಿ ಚರ್ಚೆ ನಡೆಸಬೇಕಿದೆ. ವಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್ ನಾಯಕರು ಸರ್ಕಾರಕ್ಕೆ ಕಿವಿ ಹಿಂಡಬೇಕು ಅದನ್ನು ಬಿಟ್ಟು ಸದನದಲ್ಲಿ ಯಾವುದೇ ವಿಷಯ ಪ್ರಸ್ತಾಪಿಸದೇ ಅನಗತ್ಯವಾಗಿ ಪ್ರತಿಭಟನೆ ನಡೆಸಿದರೆ ಹೇಗೆ? ತಿಂಗಳಿಗೆ ಎರಡು ಲಕ್ಷ ಸರ್ಕಾರದ ಸಂಬಳ ಪಡೆಯುತ್ತಾ ಸದನದಲ್ಲಿ ಅಹೋರಾತ್ರಿ ಧರಣಿ ಎಂದು ಹೇಳಿ ಆಟವಾಡುತ್ತಾ, ಗೊರಕೆ ಹೊಡೆಯುತ್ತಾ ಕುಳಿತರೆ ವಿಪಕ್ಷ ನಾಯಕರ ಜವಾಬ್ದಾರಿ ಎನ್ನಬೇಕೇ? ಇದು ಯಾವ ರೀತಿ ವಿಪಕ್ಷ? ಎಂದು ಕಿಡಿಕಾರಿದರು.
ಸಚಿವ ಈಶ್ವರಪ್ಪ ಅವರನ್ನು ವಜಾ ಮಾಡಬೇಕು ಎಂದು ಆಗ್ರಹಿಸುತ್ತಿರುವ ಕಾಂಗ್ರೆಸ್ ನಾಯಕರ ಧೋರಣೆ ಟೀಕಿಸಿದ ಸಚಿವ ಆರ್.ಅಶೋಕ್, ಕಾಂಗ್ರೆಸ್ ಪಕ್ಷವೇ ಬಹಳ ಗೊಂದಲದಲ್ಲಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಒಡಕು ಬೀದಿಯಲ್ಲಿದೆ. ಇವರ ಕಿತ್ತಾಟಕ್ಕೆ ಹಿಜಾಬ್ ವಿವಾದ ಚರ್ಚೆಗೆ ಬರದಂತೆ ಮಾಡಿ ಈಶ್ವರಪ್ಪ ಹೇಳಿಕೆ ಹಿಡಿದುಕೊಂಡಿದ್ದಾರೆ. ಈಶ್ವರಪ್ಪ ಅವರನ್ನು ನೇಮಕ ಮಾಡಿದ್ದು ಬಿಜೆಪಿ. ಕಾಂಗ್ರೆಸ್ ಪಕ್ಷದ ಎಲ್ಲರೂ ಬಿಜೆಪಿಗೆ ಸೇರಿಕೊಂಡು ಬಿಡಲಿ. ಆಮೇಲೆ ಬಿಜೆಪಿಗೆ ಸಲಹೆ ಕೊಡಲಿ ಎಂದು ಹೇಳಿದರು.