ಲಖ್ನೋ: ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೆ ಮೂರನೇ ಹಂತದಲ್ಲಿ ಇಂದು ಮತದಾನ ನಡೆಯುತ್ತಿದ್ದು, ಇವಿಎಂ ಜೊತೆಗಿರುವ ಫೋಟೋ ಹಂಚಿಕೊಂಡ ಹಿನ್ನೆಲೆಯಲ್ಲಿ ಕಾನ್ಪುರ ಮೇಯರ್ ಪ್ರಮೀಳಾ ಪಾಂಡೆ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಮತದಾನದ ಗೌಪ್ಯತೆಯನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಪ್ರಮೀಳಾ ಪಾಂಡೆ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಕಾನ್ಪುರದ ಮೇಯರ್ ಪ್ರಮೀಳಾ ಪಾಂಡೆ ಅವರು ಮತದಾನ ಮಾಡುವಾಗ ತಮ್ಮ ಚಿತ್ರಗಳನ್ನು ಹಂಚಿಕೊಂಡಿದ್ದರು. ವಿಷಯ ತಿಳಿದ ಜಿಲ್ಲಾಧಿಕಾರಿ ಕ್ರಮ ಕೈಗೊಂಡಿದ್ದಾರೆ.
ಹಡ್ಸನ್ ಸ್ಕೂಲ್ ಮತಗಟ್ಟೆಯಲ್ಲಿ ಮತದಾನದ ಗೌಪ್ಯತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಮೀಳಾ ಪಾಂಡೆ ವಿರುದ್ಧ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.
ಉತ್ತರ ಪ್ರದೇಶದ 16 ಜಿಲ್ಲೆಗಳಲ್ಲಿ ಹರಡಿರುವ 59 ವಿಧಾನಸಭಾ ಕ್ಷೇತ್ರಗಳಿಗೆ ಭಾನುವಾರ ಬೆಳಗ್ಗೆ ಮತದಾನ ಆರಂಭವಾಗಿದೆ. ಸಂಜೆ 6 ಗಂಟೆಯವರೆಗೆ ನಡೆಯಲಿದೆ.
ರಾಜ್ಯದಲ್ಲಿ ಇದು ಮೂರನೇ ಹಂತದ ವಿಧಾನಸಭೆ ಚುನಾವಣೆಯಾಗಿದ್ದು, 7 ಸುತ್ತುಗಳಲ್ಲಿ ಚುನಾವಣೆ ನಡೆಯಲಿದೆ.
ಈ ಹಂತದಲ್ಲಿ 627 ಅಭ್ಯರ್ಥಿಗಳು ಕಣದಲ್ಲಿದ್ದು, 2.15 ಕೋಟಿ ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ.
ಹತ್ರಾಸ್, ಫಿರೋಜಾಬಾದ್, ಇಟಾಹ್, ಕಾಸ್ಗಂಜ್, ಮೈನ್‌ಪುರಿ, ಫರೂಕಾಬಾದ್, ಕನೌಜ್, ಇಟಾವಾ, ಔರೈಯಾ, ಕಾನ್ಪುರ್ ದೇಹತ್, ಕಾನ್ಪುರ್ ನಗರ್, ಜಲೌನ್, ಝಾನ್ಸಿ, ಲಲಿತ್‌ಪುರ, ಹಮೀರ್‌ಪುರ್ ಮತ್ತು ಮಹೋಬಾ ಜಿಲ್ಲೆಗಳಲ್ಲಿ ಮತದಾನ ನಡೆಯುತ್ತಿದೆ.
2017ರ ಅಸೆಂಬ್ಲಿ ಚುನಾವಣೆಯಲ್ಲಿ 59 ಸ್ಥಾನಗಳಲ್ಲಿ ಬಿಜೆಪಿ 49 ಸ್ಥಾನಗಳನ್ನು ಗೆದ್ದಿದ್ದರೆ, ಎಸ್‌ಪಿ ಒಂಬತ್ತಕ್ಕೆ ತೃಪ್ತಿಪಟ್ಟಿತ್ತು. ಕಾಂಗ್ರೆಸ್ ಒಂದು ಸ್ಥಾನ ಪಡೆದಿದ್ದರೆ, ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಯಾವುದೇ ಸ್ಥಾನ ಗಳಿಸಿರಲಿಲ್ಲ.