ನವದೆಹಲಿ: ಪಡಿತರ ಚೀಟಿಯ ಮೂಲಕ ಆಹಾರ ಧಾನ್ಯಗಳನ್ನು ಪಡೆಯುವವರಿಗೆ ಸಂತಸದ ಸುದ್ದಿ ಇಲ್ಲಿದೆ. ನ್ಯಾಯಬೆಲೆ ಅಂಗಡಿ ಮಾಲೀಕರು ಇನ್ನುಮುಂದೆ ಪಡಿತರ ಕಡಿತ ಮಾಡಲು ಸಾಧ್ಯವಾಗುವುದಿಲ್ಲ. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ಫಲಾನುಭವಿಗಳಿಗೆ ಸರಿಯಾದ ಪ್ರಮಾಣದ ಆಹಾರ ಧಾನ್ಯಗಳು ಲಭ್ಯವಾಗುವುದನ್ನು ಖಚಿತಪಡಿಸಿಕೊಳ್ಳಲು, ಪಡಿತರ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್(ಇಪಿಒಎಸ್) ಸಾಧನಗಳನ್ನು ಅಳವಡಿಸಲು ಕೇಂದ್ರ ಸೂಚಿಸಿದೆ.
ಎಲೆಕ್ಟ್ರಾನಿಕ್ ಮಾಪಕಗಳೊಂದಿಗೆ ರೇಷನ್ ವಿತರಿಸಲು ಕೇಂದ್ರ ಸರ್ಕಾರ ಆಹಾರದ ಭದ್ರತಾ ಕಾಯ್ದೆ ನಿಯಮಗಳ ತಿದ್ದುಪಡಿ ಮಾಡಲಾಗಿದೆ. ಪಡಿತರ ಅಂಗಡಿಗಳಲ್ಲಿ ಪಾರದರ್ಶಕತೆ ಹೆಚ್ಚಿಸಲು ಮತ್ತು ಫಲಾನುಭವಿಗಳಿಗೆ ಆಹಾರ ಧಾನ್ಯಗಳನ್ನು ತೂಕ ಮಾಡುವಾಗ ಕಡಿತವನ್ನು ತಡೆಯಲು ಸರ್ಕಾರ ಈ ಕ್ರಮ ಕೈಗೊಂಡಿದೆ.
ಅಧಿಕಾರಿಯೊಬ್ಬರ ಪ್ರಕಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಜೂನ್ 18, 2021 ರಂದು ಎನ್‌ಎಫ್‌ಎಸ್‌ಎ 2013 ರ ಅಡಿಯಲ್ಲಿ ಅರ್ಹತೆಯ ಪ್ರಕಾರ ಫಲಾನುಭವಿಗಳಿಗೆ ಸರಿಯಾದ ಪ್ರಮಾಣದಲ್ಲಿ ಸಬ್ಸಿಡಿ ಆಹಾರ ಧಾನ್ಯಗಳನ್ನು ವಿತರಿಸುವುದನ್ನು ಖಚಿತಪಡಿಸಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಿದೆ.