ತುಮಕೂರು: ಪ್ರೀತಿಸಿ ಮದುವೆಯಾಗಿದ್ದ ಗ್ರಾಮ ಪಂಚಾಯತ್ ಪಿಡಿಓ ಗರ್ಭಿಣಿಯಾಗಿ ಮಗುವಾದ ಬಳಿಕ ವಂಚಸಿದ್ದಾರೆ ಎಂದು ಆರೋಪಿಸಿ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ನಲ್ಲಿ ನಡೆದಿದೆ.
ಕುಣಿಗಲ್ ನ ತೆರೆದಕುಪ್ಪೆ ಗ್ರಾಮ ಪಂಚಾಯತ್ ಪಿಡಿಓ ಸುದರ್ಶನ್ ವಿರುದ್ಧ ಪತ್ನಿ ದೂರು ನೀಡಿದ್ದಾರೆ. ದೇವದುರ್ಗ ಬೆಟ್ಟದಲ್ಲಿ 2011ರಲ್ಲಿ ಸುದರ್ಶನ್ ನನ್ನ ವಿವಾಹವಾಗಿದ್ದು, 2016ರಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿಯಾಗಿದೆ. ಕಳೆದ ವರ್ಷ ಮದುವೆಯ ವಿಚಾರವನ್ನು ಪತಿಯ ತಾಯಿ ಹಾಗೂ ಅವರ ಸಹೋದರಿಗೆ ತಿಳಿಸಿದಾಗ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಗ್ರಾಮ ಪಂಚಾಯತ್ ಗೆ ಸುದರ್ಶನ್ ಅವರನ್ನು ಹುಡುಕಿ ಹೋದರೆ ಅಲ್ಲಿ ಅವರು ಇರಲೇ ಇಲ್ಲ. ಇದರಿಂದ ಬೇಸತ್ತು ನಾನು ಹಾಗೂ ನನ್ನ ಮಗು ದೊಡ್ಡಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದೆವು. ಈ ವೇಳೆ ಸ್ಥಳೀಯರು ನಮ್ಮನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗರ್ಭಿಣಿಯಾದಾಗಿನಿಂದಲೂ ಮಗು ಬೇಡ ಎಂದು ಮಾನಸಿಕ ಕಿರುಕುಳ ನೀಡುತ್ತಿದ್ದ ಪತಿ ಸುದರ್ಶನ್, ಇದೀಗ ಮನೆಗೂ ಬಾರದೆ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ. ಪತಿ, ಅತ್ತೆ ಹಾಗೂ ನಾದಿನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ.