ನಮ್ಮಲ್ಲಿ ಬಹುತೇಕ ಮಂದಿ ನಾಣ್ಯಗಳನ್ನು ಉಳಿತಾಯ ಮಾಡುವವರಿದ್ದಾರೆ. ತಾವು ಉಳಿಸಿದ ನಾಣ್ಯಗಳನ್ನು ಒಂದು ಪೆಟ್ಟಿಗೆಗೆ ಹಾಕಿ ತುಂಬುತ್ತಾರೆ. ಕಷ್ಟಕಾಲದಲ್ಲಿ ಈ ನಾಣ್ಯಗಳು ಸಹಾಯಕ್ಕೆ ಬರುತ್ತವೆ. ಅದೇ ರೀತಿ ಅಸ್ಸಾಂನ ವ್ಯಕ್ತಿಯೊಬ್ಬರು ತಾವು ಕೂಡಿಟ್ಟ ನಾಣ್ಯಗಳಿಂದ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಅದು ಹೇಗೆ ಎಂದು ತಿಳಿಯಬೇಕು ಎಂಬ ಕುತೂಹಲ ನಿಮಗಿದ್ದಲ್ಲಿ ಮುಂದೆ ಓದಿ..
ಹೌದು, ಅಸ್ಸಾಂನ ವ್ಯಕ್ತಿಯೊಬ್ಬರು ತಾವು ಕೂಡಿಟ್ಟ ನಾಣ್ಯಗಳಿಂದಲೇ ಹೊಸ ಸ್ಕೂಟರ್ ಖರೀದಿಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದ್ದಾರೆ. ಯೂಟ್ಯೂಬರ್ ಹಿರಾಕ್ ಜೆ ದಾಸ್ ಈ ಕಥೆಯನ್ನು ಫೋಟೋ ಸಹಿತ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ.
ದ್ವಿಚಕ್ರ ವಾಹನ ಖರೀದಿಸುವ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಏಳೆಂಟು ತಿಂಗಳಿಂದ ನಾಣ್ಯಗಳನ್ನು ಕೂಡಿಡುತ್ತಿದ್ದಾಗಿ ಅವರು ಹೇಳಿದ್ದಾರೆ. ತಮ್ಮ ಬಳಿ ಸಾಕಷ್ಟು ನಾಣ್ಯಗಳ ರೂಪದಲ್ಲಿ ಹಣ ಸೇರಿದ ಕೂಡಲೇ ಅವರು ವಾಹನವನ್ನು ಖರೀದಿಸಲು ಹೌಲಿಯಲ್ಲಿರುವ ಸ್ಕೂಟರ್ ಶೋರೂಮ್‌ಗೆ ಭೇಟಿ ನೀಡಿದ್ದಾರೆ. ಸಿಬ್ಬಂದಿಯು ನಾಣ್ಯಗಳನ್ನು ಎಣಿಸಿದ ನಂತರ ಅವರಿಗೆ ಸ್ಕೂಟರ್ ಅನ್ನು ನೀಡಿದೆ. ಇದರ ವಿಡಿಯೋವನ್ನು ಕೂಡ ದಾಸ್ ಪೋಸ್ಟ್ ಮಾಡಿದ್ದಾರೆ.