ಕೋಲ್ಕತ್ತಾ: ವೈರಲ್ ಬಂಗಾಳಿ ಹಾಡು ಕಚಾ ಬಾದಮ್ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಸೃಷ್ಟಿಸಿರೋದು ನಿಮಗೆಲ್ಲಾ ತಿಳಿದೇ ಇದೆ. ಸೆಲೆಬ್ರೆಟಿಗಳು ಕೂಡ ಈ ಹಾಡನ್ನು ಬಹಳ ಇಷ್ಟಪಟ್ಟಿದ್ದಾರೆ. ಈ ಹಾಡನ್ನು ರಚಿಸಿ, ಹಾಡಿದ ಗಾಯಕ, ಕಡಲೆಕಾಯಿ ಮಾರಾಟಗಾರ ಭುವನ್ ಬಡ್ಯಾಕರ್ ಗೆ ವ್ಯಾಪಕ ಖ್ಯಾತಿಯನ್ನು ಈ ಹಾಡು ತಂದುಕೊಟ್ಟಿದೆ. ಹಾಡಿನ ರೀಮಿಕ್ಸ್ ಆವೃತ್ತಿಯನ್ನು ರಚಿಸಿದ ಸಂಗೀತ ಸಂಸ್ಥೆ ಗೋಧೂಳಿಬೆಳ ಮ್ಯೂಸಿಕ್ ಈಗ ಭುವನ್ಗೆ 3 ಲಕ್ಷ ರೂ. ನಗದು ನೀಡಿ ಸತ್ಕರಿಸಿದೆ.
ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಹಾಡಿನ ಮೂಲ ಗಾಯಕ ಕಡಲೆಕಾಯಿ ಮಾರಾಟಗಾರನಿಗೆ ಸಲ್ಲಬೇಕಾದ ಕ್ರೆಡಿಟ್ ಯಾಕೆ ಸಿಗುತ್ತಿಲ್ಲ ಎಂದು ಪ್ರಶ್ನಿಸಿದ್ದರು. ಭುವನ್ ಮನೆ ಮಾತಾಗಿದ್ದರೂ ಆತನ ಆರ್ಥಿಕ ಪರಿಸ್ಥಿತಿ ಸುಧಾರಿಸಿಲ್ಲ ಹಾಗೂ ಮತ್ತು ಯಾರೂ ಆತನಿಗೆ ಸಹಾಯ ಮಾಡಲಿಲ್ಲ ಎಂದು ಕೋಪಗೊಂಡಿದ್ದರು. ಇದಾದ ಬಳಿಕ ಭುವನ್ ಗೆ 3 ಲಕ್ಷ ರೂ. ನೀಡಲಾಗಿದೆ.
ಇನ್ನು ಈ ಬಗ್ಗೆ ಮಾತನಾಡಿದ ಗೋಧೂಳಿಬೆಳ ಮ್ಯೂಸಿಕ್ ನ ಗೋಪಾಲ್ ಘೋಸ್, ಭುವನ್ ಜೊತೆಗೆ 3 ಲಕ್ಷ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದ್ದು, ಅವರಿಗೆ ಚೆಕ್ ಮುಖಾಂತರ 1.5 ಲಕ್ಷ ರೂ. ಪಾವತಿಸಲಾಗಿದೆ. ಉಳಿದ ಹಣವನ್ನು ಮುಂದಿನ ವಾರ ನೀಡಲಾಗುವುದು ಎಂದು ಹೇಳಿದ್ದಾರೆ. ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳ ಪೊಲೀಸರು ಕೂಡ ಇವರ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಿದ್ದಾರೆ.