ಬೆಂಗಳೂರು: ಧನ್ವೀರ್ ಗೌಡ ಹಾಗೂ ಶ್ರೀಲೀಲಾ ಅಭಿನಯದ ಬೈ ಟೂ ಲವ್ ಚಿತ್ರ ಇಂದು ಬಿಡುಗಡೆಯಾಗಿದ್ದು, ಈ ಸಂಭ್ರಮದ ಸಂದರ್ಭದಲ್ಲಿರುವಾಗಲೇ ನಟನ ವಿರುದ್ಧ ದೂರು ದಾಖಲಾಗಿದೆ.
ಅಭಿಮಾನಿ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಧನ್ವೀರ್ ಗೌಡ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರಿನ ಅನುಪಮಾ ಥಿಯೇಟರ್ ಬಳಿ ಅಭಿಮಾನಿ ಚಂದ್ರಶೇಖರ್, ಧನ್ವೀರ್ ಜತೆ ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಅಭಿಮಾನಿ ಬೇಡಿಕೆಗೆ ಧನ್ವೀರ್ ಸ್ಪಂದಿಸಿಲ್ಲ. ಇದಕ್ಕೆ ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ಕೋಪಗೊಂಡ ಧನ್ವೀರ್, ಅಭಿಮಾನಿ ಚಂದ್ರಶೇಖರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹಲ್ಲೆಯಿಂದ ಗಾಯಗೊಂಡಿರುವ ಚಂದ್ರಶೇಖರ್ ಧನ್ವೀರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.