ಹಲವಾರು ಕಟ್ಟುನಿಟ್ಟಾದ ಕಾನೂನುಗಳು ಮತ್ತು ಸಾಮಾಜಿಕ ಸುಧಾರಣೆಗಳ ನಂತರವೂ, ದೇಶದ ಅನೇಕ ಭಾಗಗಳಲ್ಲಿ ಜಾತಿ ಮೇಲಾಟಗಳು ಹಾಗೂ ಈ ಸಂಬಂಧ ತಾರತಮ್ಯದ ವಿಚಾರಕ್ಕೆ ಅಂತ್ಯವಿಲ್ಲ ಎಂದು ಪದೇ ಪದೇ ಸಾಬೀತಾಗುತ್ತಲೇ ಬಂದಿದೆ.
ರಾಜಸ್ಥಾನದಿಂದ ವರದಿಯಾದ ಘಟನೆಯೊಂದರಲ್ಲಿ, ದಲಿತ ಐಪಿಎಸ್ ಅಧಿಕಾರಿಯೊಬ್ಬರು ತಮ್ಮ ವಿವಾಹ ಪೂರ್ವ ಸಮಾರಂಭದ ವೇಳೆ ಕುದುರೆಯೇರಿ ’ಬಿಂದೋರಿ’ ಶಾಸ್ತ್ರ ನಡೆಸಲು ಪೊಲೀಸ್ ರಕ್ಷಣೆ ತೆಗೆದುಕೊಳ್ಳಬೇಕಾಯಿತು. ಜೈಪುರದ ಭಬ್ರು ಪೊಲೀಸ್ ಠಾಣೆ ವ್ಯಾಪ್ತಿಯ ಭಗತ್ಪುರ ಜೈಸಿಂಗ್ಪುರ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ.
ಮೆಹಂದಿ ಕಾರ್ಯಕ್ರಮಕ್ಕೆ ತಯಾರಾಗಿದ್ದ ವದುವನ್ನ ನೋಡಿ ಆಶ್ಚರ್ಯಗೊಂಡ ವರ: ವಿಡಿಯೋ ವೈರಲ್…!
ಈ ಹಿಂದೆ ಕುದುರೆ ಸವಾರಿ ಮಾಡಿದ ದಲಿತ ವರರ ಮೇಲೆ ದಾಳಿಗಳಾದ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಭಾರೀ ಪೊಲೀಸ್ ಭದ್ರತೆಯಲ್ಲಿ ಐಪಿಎಸ್ ಅಧಿಕಾರಿ ಸುನೀಲ್ ಕುಮಾರ್ ಧನ್ವಂತ ಕುದುರೆ ಸವಾರಿ ಮಾಡಿದರು. ಈ ಪೊಲೀಸ್ ಅಧಿಕಾರಿ ಫೆಬ್ರವರಿ 18 ರಂದು ಮದುವೆಯಾಗಲಿದ್ದಾರೆ ಎಂದು ಹಿಂದಿ ದಿನಪತ್ರಿಕೆ ʼಪತ್ರಿಕಾʼ ವರದಿ ಮಾಡಿದೆ.
ಮಂಗಳವಾರ, ಸೂರಜ್ಪುರದ ಐಪಿಎಸ್ ಅಧಿಕಾರಿಯ ಕುಟುಂಬವು ವಿವಾಹ ಪೂರ್ವ ಸಮಾರಂಭಕ್ಕೆ ಆಹ್ವಾನ ಪಡೆದಿದೆ. ಇದರ ಬೆನ್ನಲ್ಲೇ ಐಪಿಎಸ್ ಅಧಿಕಾರಿಯು ಡಿಜೆ ಪಾರ್ಟಿ ನಡುವೆ ಕುದುರೆ ಏರಿ ಸೂರಜ್ಪುರ ತಲುಪಿದ್ದಾರೆ.
ಮಂಗಳವಾರ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ವರನ ಮೆರವಣಿಗೆ ಕಾರ್ಯಕ್ರಮ ನಡೆಯಿತು. ಮೇಲ್ಜಾತಿಯ ಗೂಂಡಾಗಳು ಕುದುರೆ ಮೇಲೆ ಬರುವ ದಲಿತ ವರರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ ಘಟನೆಗಳ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
“ನಾವು ಮುಂಜಾಗ್ರತಾ ಕ್ರಮವಾಗಿ ಈ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸಿದ್ದೇವೆ. ಅಧಿಕಾರಿಯ ಬಿಂದೋರಿ ಸಮಾರಂಭ ಶಾಂತಿಯುತವಾಗಿ ನಡೆಸಲಾಯಿತು” ಎಂದು ಜೈಪುರ (ಗ್ರಾಮೀಣ) ಎಸ್ಪಿ ಮನೀಶ್ ಅಗರ್ವಾಲ್ ಹೇಳಿದರು.
ಹಿಂದಿನ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಪೊಲೀಸ್ ತುಕಡಿಯನ್ನು ನಿಯೋಜಿಸಲಾಗಿತ್ತು, “ನಾನು ವರದಕ್ಷಿಣೆ ಇಲ್ಲದೆ ಮದುವೆಯಾಗುತ್ತಿದ್ದೇನೆ” ಎಂದು ಐಪಿಎಸ್ ಅಧಿಕಾರಿ ಸುನೀಲ್ ಕುಮಾರ್ ಧನ್ವಂತ ತಿಳಿಸಿದ್ದಾರೆ.
ಕಳೆದ ವರ್ಷ ನವೆಂಬರ್ನಲ್ಲಿ ರಾಜಸ್ಥಾನದ ಜೈಪುರದಲ್ಲಿ ವಧುವಿನ ಮನೆಗೆ ಕುದುರೆ ಏರಿ ಹೋಗುತ್ತಿದ್ದ ದಲಿತ ವರನ ಮದುವೆಯ ಮೆರವಣಿಗೆಯ ಮೇಲೆ ಕಲ್ಲು ಎಸೆಯಲಾಗಿತ್ತು. ಘಟನೆ ನಂತರ, 10 ಜನರನ್ನು ಬಂಧಿಸಿದ್ದಲ್ಲದೇ, ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಮತ್ತು ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ (ಎಎಸ್ಪಿ) ಸೇರಿದಂತೆ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಯಿತು. ಸಮಾರಂಭದ ಭದ್ರತೆಗಾಗಿ ನಿಯೋಜಿಸಲಾಗಿದ್ದ ಪೊಲೀಸರ ಸಮ್ಮುಖದಲ್ಲಿ ದಾಳಿ ನಡೆದಿತ್ತು.