ಬೆಂಗಳೂರು: ರಾಜ್ಯದಲ್ಲಿ 15,000 ಶಿಕ್ಷಕರ ನೇಮಕಾತಿಗೆ ಚಾಲನೆ ನೀಡಲಾಗಿದೆ. ಇದರೊಂದಿಗೆ 16,000 ಪೊಲೀಸರ ನೇಮಕಾತಿ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಪರಿಷತ್ ನಲ್ಲಿ ಬಿಜೆಪಿಯ ಅರುಣ ಶಹಾಪುರ, ಜೆಡಿಎಸ್ ನ ಕೆ.ಟಿ. ಶ್ರೀಕಂಠೇಗೌಡ, ದೇವೇಗೌಡ ಅವರ ಪ್ರಶ್ನೆಗೆ ಉತ್ತರ ನೀಡಿದ ಸಿಎಂ, ರಾಜ್ಯದಲ್ಲಿ 15000 ಶಿಕ್ಷಕರ ನೇಮಕಾತಿಗೆ ಚಾಲನೆ ನೀಡಿದ್ದು, 16 ಸಾವಿರ ಪೊಲೀಸರ ನೇಮಕಾತಿ ನಡೆಯುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 14,000 ಖಾಲಿ ಹುದ್ದೆಗಳ ನೇಮಕಾತಿಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆ ಪರಿಷ್ಕರಣೆಗೆ 7ನೇ ವೇತನ ಆಯೋಗ ರಚಿಸಲು ಅಧಿಕಾರಿಗಳ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನದಲ್ಲಿ ತಾರತಮ್ಯ ಸರಿಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.