ಶಾಲೆಗಳಲ್ಲಿ ಕಳಪೆ ಆಹಾರ ಹಾಗೂ ಇತರೆ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಆಗ್ರಹಿಸಿ ಜಾರ್ಖಂಡ್ನ ಸಿಮ್ಡೇಗಾದ ಜವಾಹಾರ್ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ತಮ್ಮನ್ನು ತಾವು ಸಂಭಾಗಣದಲ್ಲಿ ಕೂಡಿ ಹಾಕಿಕೊಂಡ ವಿದ್ಯಾರ್ಥಿಗಳು ಶಾಲೆಯಲ್ಲಿರುವ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸದ ಹೊರತು ತಾವು ಕೋಣೆಯಿಂದ ಹೊರಬರುವುದಿಲ್ಲ ಎಂದು ಹೇಳಿದ್ದಾರೆ.
ಸುಮಾರು ಆರು ಗಂಟೆ ಕಳೆದರೂ ವಿದ್ಯಾರ್ಥಿಗಳು ತಮ್ಮ ಪಟ್ಟು ಸಡಿಲಿಸದೇ ಇದ್ದದ್ದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಡಿಸಿ ಸುಶಾಂತ್ ಗೌರವ್ ಶಾಲೆಯಲ್ಲಿ ಕೈಗೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ಶೀಘ್ರದಲ್ಲೇ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.ಇದಾದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಹಿಂಪಡೆದರು.
ಬುಧವಾರ ಬೆಳಗ್ಗೆ ಉಪಹಾರ ಸೇವಿಸಿದ ಬಳಿಕ 9 ರಿಂದ 12ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಸಭಾಂಗಣದಲ್ಲಿ ಜಮಾಯಿಸಿ ಶಾಲೆಯಲ್ಲಿ ನಮಗೆ ಕಳಪೆ ಆಹಾರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಅಲ್ಲದೇ ನಾವು ಈ ಬಗ್ಗೆ ಸಾಕಷ್ಟು ಬಾರಿ ದೂರು ನೀಡಿದರೂ ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಹೇಳಿದರು.
ಮಕ್ಕಳು ಸಭಾಂಗಣದಲ್ಲಿ ತಮ್ಮನ್ನು ತಾವು ಕೂಡಿ ಹಾಕಿಕೊಂಡ ಬಳಿಕ ಶಾಲಾ ಆಡಳಿತ ಮಂಡಳಿಯು ಮಕ್ಕಳನ್ನು ಕೊಠಡಿಯಿಂದ ಹೊರ ತರಲು ಸಾಕಷ್ಟು ಪ್ರಯತ್ನ ಪಟ್ಟಿದೆ. ಆದರೆ ವಿದ್ಯಾರ್ಥಿಗಳು ಮಾತ್ರ ತಮ್ಮ ಪಟ್ಟು ಸಡಿಲಿಸಲಿಲ್ಲ.
ಬರೋಬ್ಬರಿ ಆರು ಗಂಟೆಗಳ ಬಳಿಕ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಯು ಮಕ್ಕಳ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸೋದಾಗಿ ಹೇಳಿದರು. ಇದಾದ ಬಳಿಕ ಮಕ್ಕಳು ಕೊಠಡಿ ಬಾಗಿಲನ್ನು ತೆರೆದಿದ್ದಾರೆ.