ಎರಡು ನಿಮಿಷಗಳ ಕಾಲ ಇಕ್ಕಟ್ಟಾದ ಜಾಗದಲ್ಲಿ ಕುಳಿತರೆ ಸಾಕು ಪ್ರಾಣ ಹೋದಂತೆ ಎನ್ನಿಸುತ್ತದೆ. ಆದರೆ ಇಲ್ಲೊಂದು ಚಿರತೆಯ ಮರಿ ಎರಡು ದಿನಗಳ ಕಾಲ ಪ್ಲಾಸ್ಟಿಕ್ ಡಬ್ಬಿಯೊಳಗೆ ಬಂಧಿಯಾಗಿತ್ತು. ಹೌದು, ಚಿರತೆ ಮರಿಯೊಂದರ ತಲೆ ಪ್ಲಾಸ್ಟಿಕ್ ಡಬ್ಬಿಯೊಳಗೆ ಸಿಲುಕಿಕೊಂಡಿತ್ತು. ಈ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ವರದಿಯಾಗಿದೆ. ಸಧ್ಯ ತಲೆ ಸಿಲುಕಿಸಿಕೊಂಡು ಒದ್ದಾಡುತ್ತಿದ್ದ ಚಿರತೆ ಮರಿಯನ್ನ ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ.
ಥಾಣೆ ಜಿಲ್ಲೆಯ ಬದ್ಲಾಪುರ್ ಗ್ರಾಮದ ಬಳಿ ಭಾನುವಾರ ರಾತ್ರಿ ಪ್ಲಾಸ್ಟಿಕ್ ನೀರಿನ ಕ್ಯಾನ್ನಲ್ಲಿ ತಲೆ ಸಿಲುಕಿಕೊಂಡಿದ್ದ ಚಿರತೆಯನ್ನ ಮೊದಲು ದಾರಿಹೋಕರೊಬ್ಬರು ನೋಡಿದ್ದಾರೆ. ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿ ತನ್ನ ಕಾರಿನಿಂದಲೇ ಚಿರತೆಯು ಬಾಟಲಿಯಲ್ಲಿ ತಲೆ ಸಿಲುಕಿಸಿಕೊಂಡಿರುವ ದೃಶ್ಯವನ್ನು ಸೆರೆ ಹಿಡಿದಿದ್ದರು. ಚಿರತೆಮರಿ ಈ ಬಾಟಲಿಯಿಂದ ತಲೆಯನ್ನು ಬಿಡಿಸಲು ಹತಾಶವಾಗಿ ಪ್ರಯತ್ನಿಸುತ್ತಿರುವುದನ್ನ ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ಆದರೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳುವಷ್ಟರಲ್ಲಿ ಚಿರತೆ ಕಾಡಿಗೆ ತೆರಳಿತ್ತು.
ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ದೂರು
ಬಳಿಕ ಅರಣ್ಯಾಧಿಕಾರಿಗಳು, ಸ್ವಯಂಸೇವಕರು ಮತ್ತು ಗ್ರಾಮಸ್ಥರನ್ನು ಒಳಗೊಂಡ ತಂಡ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿ, ಸುಮಾರು 48 ಗಂಟೆಗಳ ನಂತರ ಚಿರತೆ ಮರಿಯನ್ನು ಸೆರೆ ಹಿಡಿದು ಪ್ಲಾಸ್ಟಿಕ್ ಬಾಟಲಿಯಿಂದ ಅದಕ್ಕೆ ಮುಕ್ತಿ ನೀಡಿದೆ. ಬಾಟಲ್ ತಲೆಯಲ್ಲಿ ಸಿಲುಕಿಕೊಂಡ ಪರಿಣಾಮ ಈ ಚಿರತೆ ಮರಿಗೆ ಸುಮಾರು ಎರಡು ದಿನಗಳವರೆಗೆ ಸರಿಯಾಗಿ ಉಸಿರಾಡಲು ಅಥವಾ ತಿನ್ನಲು ಅಥವಾ ಕುಡಿಯಲು ಸಾಧ್ಯವಾಗದ ಕಾರಣ ತೀವ್ರವಾಗಿ ದಣಿದಿತ್ತು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು, ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನ (ಎಸ್ಜಿಎನ್ಪಿ), ರೆಸ್ಕಿಂಗ್ ಅಸೋಸಿಯೇಷನ್ ಫಾರ್ ವೈಲ್ಡ್ಲೈಫ್ ವೆಲ್ಫೇರ್ (RAWW) ಸದಸ್ಯರು ಮತ್ತು ಕೆಲವು ಗ್ರಾಮಸ್ಥರು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಗಸ್ತು ತಿರುಗುತ್ತಿದ್ದ ರಕ್ಷಣಾ ತಂಡ ಹಾಗೂ ಸ್ವಯಂಸೇವಕರು, ಚಿರತೆ ಕಂಡುಬಂದರೆ ಅಧಿಕಾರಿಗಳಿಗೆ ತಿಳಿಸುವಂತೆ ಗ್ರಾಮಸ್ಥರಿಗೆ ತಿಳಿಸಿದ್ದರು, ಎಂದು 30 ಜನರು ಭಾಗವಹಿಸಿದ್ದ ರಕ್ಷಣಾ ಕಾರ್ಯಾಚರಣೆಯ ತಂಡದ ಸದಸ್ಯರೊಬ್ಬರು ಹೇಳಿದ್ದಾರೆ.