ಕಳೆದ ವರ್ಷ ಆಗಸ್ಟ್ ತಿಂಗಳವರೆಗೆ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಛನ್ರಿಗೆ ಅಂಗರಕ್ಷಕನಾಗಿ ಕೆಲಸ ಮಾಡಿದ್ದ ಮುಂಬೈ ಪೊಲೀಸ್ ಪೇದೆಯನ್ನು ಕರ್ತವ್ಯ ಉಲ್ಲಂಘನೆ ಆರೋಪದ ಅಡಿಯಲ್ಲಿ ಅಮಾನತುಗೊಳಿಸಲಾಗಿದೆ.
ಕಾನ್ಸ್ಟೇಬಲ್ ಜೀತೇಂದ್ರ ಶಿಂಧೆಯನ್ನು ಅಮಾನತುಗೊಳಿಸಿ ನೋಟಿಸ್ ನೀಡಲಾಗಿದ್ದು, ಇವರ ವಿರುದ್ಧ ಪೊಲೀಸ್ ಇಲಾಖೆಯು ತನಿಖೆ ಆರಂಭಿಸಿದೆ ಎಂದು ಅಧಿಕಾರಿಯು ಮಾಹಿತಿ ನೀಡಿದ್ದಾರೆ.
ಶಿಂಧೆಯನ್ನು ಈ ಹಿಂದೆ ಮುಂಬೈನ ಪೊಲೀಸ್ ಇಲಾಖೆಯ ರಕ್ಷಣೆ ಹಾಗೂ ಭದ್ರತಾ ಶಾಖೆಯಲ್ಲಿ ನಿಯೋಜಿಸಲಾಗಿತ್ತು. ಶಿಂಧೆ 2015ರಿಂದ 2021ರ ಆಗಸ್ಟ್ ತಿಂಗಳವರೆಗೆ ಅಮಿತಾಬ್ ಬಚ್ಛನ್ರಿಗೆ ಅಂಗರಕ್ಷಕರಾಗಿ ಕೆಲಸ ಮಾಡಿದ್ದರು. ಶಿಂಧೆಯ ವಾರ್ಷಿಕ ಗಳಿಕೆಯು 1.5 ಕೋಟಿ ರೂಪಾಯಿ ಇದೆ ಎಂದು ಮುಂಬೈ ಪೊಲೀಸ್ ಕಮಿಷನರ್ ಹೇಮಂತ್ ನಗ್ರಾಲೆ ಶಂಕೆ ವ್ಯಕ್ತಪಡಿಸಿದ್ದಾರೆ.
ಶಿಂಧೆ ಅವರ ಅಮಾನತಿಗೆ ನಿಖರವಾದ ಕಾರಣವನ್ನು ಕೇಳಿದಾಗ, ಹಿರಿಯ ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು, ಕಾನ್ಸ್ಟೇಬಲ್ ತನ್ನ ಮೇಲಾಧಿಕಾರಿಗಳಿಗೆ ತಿಳಿಸದೆ ಕನಿಷ್ಠ ನಾಲ್ಕು ಬಾರಿ ದುಬೈ ಮತ್ತು ಸಿಂಗಾಪುರಕ್ಕೆ ಪ್ರಯಾಣಿಸಿದ್ದಾರೆ ಎಂದು ಹೇಳಿದರು. ಸೇವಾ ನಿಯಮಗಳ ಪ್ರಕಾರ ವಿದೇಶಕ್ಕೆ ತೆರಳಲು ಹಿರಿಯ ಅಧಿಕಾರಿಗಳ ಅನುಮತಿ ಪಡೆಯಬೇಕಿತ್ತು ಎಂದು ಹೇಳಿದರು.