ಇಂಡೋನೇಷ್ಯಾದ ಧಾರ್ಮಿಕ ಬೋರ್ಡಿಂಗ್ ಶಾಲೆಗಳ ಹಲವಾರು ಭಾಗಗಳಲ್ಲಿ ಲೈಂಗಿಕ ದೌರ್ಜನ್ಯದ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದ ಪ್ರಕರಣದಲ್ಲಿ ಇಂಡೋನೇಷ್ಯಾದ ನ್ಯಾಯಾಲಯವು 13 ವಿದ್ಯಾರ್ಥಿಗಳನ್ನು ಅತ್ಯಾಚಾರಗೈದಿದ್ದ ಶಿಕ್ಷಕನಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಆದೇಶ ಹೊರಡಿಸಿದೆ.
36 ವರ್ಷದ ಹೆರ್ರಿ ವಿರಾವನ್ ವಿರುದ್ಧ 13 ವಿದ್ಯಾರ್ಥಿನಿಯರ ಅತ್ಯಾಚಾರಗೈದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪಶ್ಚಿಮ ಜಾವಾದ ಬಂಡಂಗ್ ಜಿಲ್ಲಾ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿದೆ. ಅತ್ಯಾಚಾರಕ್ಕೊಳಗಾದ 13 ವಿದ್ಯಾರ್ಥಿನಿಯರು ಅಪ್ರಾಪ್ತೆಯರಾಗಿದ್ದರು ಎನ್ನಲಾಗಿದೆ. ಅಲ್ಲದೇ ಇದರಲ್ಲಿ ಎಂಟು ವಿದ್ಯಾರ್ಥಿನಿಯರು ಗರ್ಭ ಧರಿಸಿದ್ದರು ಎನ್ನಲಾಗಿದೆ.
ಕಳೆದ ವರ್ಷ ಅತ್ಯಾಚಾರಕ್ಕೊಳದ ವಿದ್ಯಾರ್ಥಿನಿಯೊಬ್ಬರ ಕುಟುಂಬಸ್ಥರು ತಮ್ಮ ಪುತ್ರಿಯ ಮೇಲೆ ಅತ್ಯಾಚಾರ ಎಸಗಲಾಗಿದೆ ಹಾಗೂ ಆಕೆ ಈಗ ಗರ್ಭಿಣಿಯಾಗಿದ್ದಾಳೆ ಎಂದು ಆರೋಪಿಸಿದ ಬಳಿಕ ಈ ಬೆಚ್ಚಿ ಬೀಳಿಸುವ ಪ್ರಕರಣವು ಬೆಳಕಿಗೆ ಬಂದಿತ್ತು.