ಬೆಂಗಳೂರು: ಹಿಜಾಬ್ ಹಾಗೂ ಕೇಸರಿ ಶಾಲು ಸಂಘರ್ಷಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತ್ರಿಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ಆರಂಭಗೊಂಡಿದೆ.
ಸಿಜೆ ರಿತುರಾಜ್ ಅವಸ್ತಿ, ನ್ಯಾ.ಕೃಷ್ಣ ದೀಕ್ಷಿತ್ ಹಾಗೂ ನ್ಯಾ.ಖಾಜಿ ಜೈಬುನ್ನೀಸಾ ಮೊಹಿದ್ದೀನ್ ನೇತೃತ್ವದ ಪೀಠದಲ್ಲಿ ಹಿಜಾಬ್ ಕುರಿತ ಅರ್ಜಿ ವಿಚಾರಣೆ ಆರಂಭವಾಗಿದೆ. ಹಿಜಾಬ್ ಕುರಿತು ಈವರೆಗೆ ಹೈಕೋರ್ಟ್ ನಲ್ಲಿ ಒಟ್ಟು 9 ಅರ್ಜಿಗಳು ಸಲ್ಲಿಕೆಯಾಗಿದ್ದು, ಎಲ್ಲಾ ಅರ್ಜಿಗಳ ವಿಚಾರಣೆ ಬಳಿಕ ತೀರ್ಪು ಹೊರಬೀಳಲಿದೆ.
ಅರ್ಜಿದಾರರ ಪರ ಹಿರಿಯ ವಕೀಲ ದೇವದತ್ ಕಾಮತ್ ವಾದ ಮಂಡಿಸುತ್ತಿದ್ದು, ಸರ್ಕಾರದ ಪರ ಎಜಿ ಪ್ರಭುಲಿಂಗ ನಾವದಗಿ ಪ್ರತಿವಾದ ಮಂಡಿಸಲಿದ್ದಾರೆ.
ಈಗಾಗಲೇ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದು, ಮುಂದಿನ ಆದೇಶದವರೆಗೆ ಯಾವುದೇ ಧಾರ್ಮಿಕ ಗುರುತು ಧರಿಸಿ ಶಾಲಾ-ಕಾಲೇಜಿಗೆ ಹೋಗುವಂತಿಲ್ಲ, ಸಮವಸ್ತ್ರ ಕಡ್ಡಾಯ ಎಂದು ಆದೇಶ ನೀಡಿದೆ. ಆದಾಗ್ಯೂ ಹಲವು ಶಾಲೆಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಆಗಮಿಸುತ್ತಿರುವುದು ಕೋರ್ಟ್ ನಿಯಮ ಉಲ್ಲಂಘನೆಯಾಗಿದೆ. ಈ ನಡುವೆ ನಾಳೆಯಿಂದ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳು ಆರಂಭವಾಗುತ್ತಿದ್ದು, ರಾಜ್ಯದ ಜನತೆಯ ಚಿತ್ತ ಹೈಕೋರ್ಟ್ ತೀರ್ಪಿನತ್ತ ನೆಟ್ಟಿದೆ.