ಪ್ರಸ್ತುತ ನಾಗ್ಪುರದಿಂದ ಮುಂಬೈಗೆ ರೈಲಿನಲ್ಲಿ ಪ್ರಯಾಣಿಸಬೇಕಾದರೆ, 12 ಗಂಟೆ ಸಮಯ ಹಿಡಿಯುತ್ತದೆ. ಆದರೆ ಶೀಘ್ರದಲ್ಲೇ ಈ ಸಮಯ ಕೇವಲ ಮೂರುವರೆ ಗಂಟೆ ಹಿಡಿಯಲಿದೆ. ಹೇಗೆ ಅಂತಾ ಕೇಳಿದ್ರೆ ಅದಕ್ಕೆ ಉತ್ತರ ಬುಲೆಟ್ ಟ್ರೈನ್.
ಭಾರತೀಯ ರೈಲ್ವೇಯು ಮುಂಬೈ ಮತ್ತು ನಾಗ್ಪುರ ನಡುವೆ ಬುಲೆಟ್ ರೈಲು ಸೇವೆಯನ್ನು ಪ್ರಸ್ತಾಪಿಸಿದೆ, ಅದು ಗಂಟೆಗೆ 350 ಕಿಲೋಮೀಟರ್ ವೇಗದಲ್ಲಿ ಚಲಿಸುವ ನಿರೀಕ್ಷೆಯಿದೆ.
ಮುಂಬೈ-ನಾಗ್ಪುರ ಹೈಸ್ಪೀಡ್ ರೈಲು ಕಾರಿಡಾರ್‌ಗೆ ವಿವರವಾದ ಯೋಜನಾ ವರದಿ (ಡಿಪಿಆರ್) ಈ ತಿಂಗಳ ಅಂತ್ಯ ಅಥವಾ ಮಾರ್ಚ್ ಮೊದಲ ವಾರದೊಳಗೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಚಿವ ರಾವ್ ಸಾಹೇಬ್ ಧನ್ವೆ ಶನಿವಾರ ಪಿಟಿಐಗೆ ತಿಳಿಸಿದ್ದಾರೆ.
4 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ 766 ಕಿ.ಮೀ
ಶೀಘ್ರದಲ್ಲೇ ಸಿದ್ಧವಾಗಲಿರುವ ಸಮೃದ್ಧಿ ಎಕ್ಸ್‌ಪ್ರೆಸ್‌ವೇ ಜೊತೆಗೆ ಪ್ರಸ್ತಾವಿತ ಬುಲೆಟ್ ಟ್ರೈನ್ ಕೇವಲ 4 ಗಂಟೆಗಳಲ್ಲಿ 766 ಕಿಲೋಮೀಟರ್‌ಗಳನ್ನು ಕ್ರಮಿಸುವ ನಿರೀಕ್ಷೆಯಿದೆ. ಡಿಪಿಆರ್ ಅನ್ನು ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಎನ್‌ಎಚ್‌ಎಸ್‌ಆರ್‌ಸಿಎಲ್) ಸಿದ್ಧಪಡಿಸುತ್ತದೆ ಎಂದು ಧನ್ವೆ ಹೇಳಿದ್ದಾರೆ.
ಭಾರತದ ಮಾರ್ಕ್ಯೂ ಬುಲೆಟ್ ರೈಲು ಕಾರ್ಯಕ್ರಮಕ್ಕೆ ಒತ್ತು ನೀಡಲು ಭಾರತೀಯ ರೈಲ್ವೆ ಸಿದ್ಧಪಡಿಸುತ್ತಿರುವ ಏಳು ಹೈಸ್ಪೀಡ್ ರೈಲು ಕಾರಿಡಾರ್‌ಗಳಲ್ಲಿ ಈ ಯೋಜನೆಯೂ ಸೇರಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ರಾಜ್ಯಸಭೆಗೆ ತಿಳಿಸಿದ್ದಾರೆ.
ಈ ಜಿಲ್ಲೆಯಲ್ಲಿ ಗ್ರಾಮಗಳಿಗೂ ಮಾಡಲಾಗುತ್ತದೆ ವಿವಾಹ…..! ಇದರ ಹಿಂದೆ ಇದೆ ಈ ವಿಶೇಷ ಕಾರಣ
30ರಷ್ಟು ಭೂಮಿ ಖಾಸಗಿಯವರಿಂದ ಸ್ವಾಧೀನ
ಸಮೃದ್ಧಿ ಹೆದ್ದಾರಿ ಯೋಜನೆಯಲ್ಲಿ ನಾವು ಈ ಸೂಪರ್‌ಫಾಸ್ಟ್ ರೈಲನ್ನು ಪ್ರಸ್ತಾಪಿಸಿದ್ದೇವೆ. ಈಗಾಗಲೇ ನಮ್ಮ ಸ್ವಾಧೀನದಲ್ಲಿ 70 ಪ್ರತಿಶತದಷ್ಟು ಭೂಮಿಯನ್ನು ಹೊಂದಿದ್ದೇವೆ. ಈಗ, ನಾವು ಕೇವಲ 30 ಪ್ರತಿಶತ ಭೂಮಿಯನ್ನು ಖಾಸಗಿಯವರಿಂದ ಪಡೆದುಕೊಳ್ಳಬೇಕಾಗಿದೆ ಎಂದು ಸಚಿವ ಧನ್ವೆ ತಿಳಿಸಿದ್ದಾರೆ.
ಇಡೀ ರೈಲು ಕಾರಿಡಾರ್ ಎಲಿವೇಟೆಡ್ ಟ್ರ್ಯಾಕ್‌ನಲ್ಲಿರುವುದರಿಂದ ಯಾವುದೇ ಭೂಮಿಯನ್ನು ವಶಪಡಿಸಿಕೊಳ್ಳುವುದಿಲ್ಲ. ಆದ್ದರಿಂದ ಈ ಯೋಜನೆಯು ರೈತರಿಗೆ ಯಾವುದೇ ಅನಾನುಕೂಲತೆಯನ್ನು ಉಂಟುಮಾಡುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
10 ಜಿಲ್ಲೆಗಳ ಮೂಲಕ ಹಾದುಹೋಗಲಿದೆ ಬುಲೆಟ್ ಟ್ರೈನ್
ಲಗತ್ಪುರಿಯಿಂದ ರೈಲು ತನ್ನ ಮಾರ್ಗವನ್ನು ಬದಲಾಯಿಸುತ್ತದೆ ಮತ್ತು DPR ಯೋಜನೆಯು ರೈಲಿನ ಮಾರ್ಗದಲ್ಲಿನ ನಿಲ್ದಾಣಗಳ ಸಂಖ್ಯೆಯನ್ನು ಸಹ ಉಲ್ಲೇಖಿಸಲಿದೆ. ರೈಲು ಔರಂಗಾಬಾದ್‌ನಂತಹ ಪ್ರಮುಖ ನಗರಗಳಲ್ಲಿ ನಿಲುಗಡೆಗಳನ್ನು ಹೊಂದಿರುತ್ತದೆ ಮತ್ತು ಹತ್ತು ಜಿಲ್ಲೆಗಳ ಮೂಲಕ ಹಾದುಹೋಗುವ ನಿರೀಕ್ಷೆಯಿದೆ.
ಮುಂಬೈ ಮತ್ತು ನಾಗ್ಪುರ ನಡುವಿನ ಸಾರಿಗೆಗೆ ಬುಲೆಟ್ ರೈಲು ಮತ್ತೊಂದು ಉತ್ತಮ ಆಯ್ಕೆಯನ್ನು ಒದಗಿಸುತ್ತದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಈ ಹಿಂದೆ ಹೇಳಿದ್ದರು. ಈ ಯೋಜನೆಗೆ ಒಂದು ಲಕ್ಷ ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಡಿಪಿಆರ್‌ಗಾಗಿ ಅಧಿಕಾರಿಗಳು, ಲಿಡಾರ್ (ಲೈಟ್ ಡಿಟೆಕ್ಷನ್ ಮತ್ತು ರೇಂಜಿಂಗ್) ಮತ್ತು ವೈಮಾನಿಕ,ಜೊತೆಗೆ ಸಾಮಾಜಿಕ ಮತ್ತು ಪರಿಸರದ ಪ್ರಭಾವದ ಮೌಲ್ಯಮಾಪನ ಸೇರಿದಂತೆ ಹಲವಾರು ಸಮೀಕ್ಷೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ.
ಮುಂಬೈ ತಲುಪುವ ಮೊದಲು ಹೈಸ್ಪೀಡ್ ರೈಲು ಜಾಲವು ವಾರ್ಧಾ, ಜಲ್ನಾ, ಶಿರಡಿ, ನಾಸಿಕ್, ಶಹಾಪುರದಿಂದ ಚಲಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರ ನಡುವೆ 508 ಕಿಮೀ ಮುಂಬೈ-ಅಹಮದಾಬಾದ್ ಕಾರಿಡಾರ್ ಕೆಲಸ ಈಗಾಗಲೇ ನಡೆಯುತ್ತಿದೆ. ಇದರ ವೆಚ್ಚ 1.1 ಲಕ್ಷ ಕೋಟಿ ರೂ. ಎನ್ನಲಾಗುತ್ತಿದೆ.