14/02/2019 ಈ ದಿನಾಂಕವನ್ನು ಬಹುಶಃ ಯಾವೊಬ್ಬ ದೇಶಪ್ರೇಮಿಯು ಮರೆಯುವುದಿಲ್ಲ. ಕರಾಳ ಪುಲ್ವಾಮಾ ದಾಳಿಯಾಗಿ ಇಂದಿಗೆ ಮೂರು ವರ್ಷಗಳಾಗಿವೆ.
ಜಮ್ಮು ಮತ್ತು ಕಾಶ್ಮೀರದ ಜಿಲ್ಲೆಯಲ್ಲಿ ಭಾರತೀಯ ಭದ್ರತಾ ಪಡೆಗಳ ಮೇಲೆ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಒಂದಾದ ಪುಲ್ವಾಮ ಭಯೋತ್ಪಾದಕ ದಾಳಿಯಲ್ಲಿ 40 ಸಿಆರ್ಪಿಎಫ್ ಜವಾನರು ಹುತಾತ್ಮರಾಗಿದ್ದರು.
ಇದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನದ ನೆಲದಲ್ಲಿ ಹಲವಾರು ಭಯೋತ್ಪಾದಕ ಶಿಬಿರಗಳ ಮೇಲೆ ಬಾಂಬ್ ದಾಳಿ ಮಾಡುವ ಮೂಲಕ ಭಾರತವು ಯಶಸ್ವಿಯಾಗಿ ಸೇಡು ತೀರಿಸಿಕೊಂಡಿತು.
ಅಂದು ಏನಾಯಿತು ?
ಫೆಬ್ರವರಿ 14, 2019 ರಂದು, ಪುಲ್ವಾಮಾದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ ನಡೆಸಿದ ಭಯೋತ್ಪಾದಕ ದಾಳಿಯಲ್ಲಿ ನಲವತ್ತು ಸಿಆರ್ಪಿಎಫ್ ಸಿಬ್ಬಂದಿ ಹುತಾತ್ಮರಾದರು.
BIG NEWS: ರಾಜ್ಯದಲ್ಲಿ ಆನ್ ಲೈನ್ ಗೇಮಿಂಗ್ ಗೆ ಗ್ರೀನ್ ಸಿಗ್ನಲ್
ಅಂದು ಜಮ್ಮುವಿನಿಂದ ಶ್ರೀನಗರಕ್ಕೆ 2,500 ಕ್ಕೂ ಹೆಚ್ಚು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಸಿಬ್ಬಂದಿಯನ್ನು ಸಾಗಿಸಲಾಗುತ್ತಿತ್ತು. ಸಿಬ್ಬಂದಿಗಳಿದ್ದ 78 ವಾಹನಗಳ ಕಾನ್ವಾಯ್ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಪ್ರಯಾಣಿಸುತ್ತಿತ್ತು.
ಮಧ್ಯಾಹ್ನ 3:15ರ ಸುಮಾರಿಗೆ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಕಾರೊಂದು ಸಿಆರ್ಪಿಎಫ್ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಸ್ ಒಂದಕ್ಕೆ ಡಿಕ್ಕಿ ಹೊಡೆದಿದೆ. ಇದು ಭಯಾನಕ ಸ್ಫೋಟಕ್ಕೆ ಕಾರಣವಾಯಿತು, 76 ನೇ ಬೆಟಾಲಿಯನ್ನ 40 ಸಿಆರ್ಪಿಎಫ್ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿದರು ಮತ್ತು ಅನೇಕರು ಗಾಯಗೊಂಡರು.
ದಾಳಿ ಮಾಡಿದವರು ಯಾರು ?
ಜೈಶ್-ಎ-ಮೊಹಮ್ಮದ್ (ಜೆಇಎಂ) ದಾಳಿಯ ಹೊಣೆ ಹೊತ್ತುಕೊಂಡಿದೆ. ಇದು ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು. ಘಟನೆಯ ನಂತರ, ಅವರು ಜಮ್ಮು ಮತ್ತು ಕಾಶ್ಮೀರದ ಕಾಕಪೋರಾದ 22 ವರ್ಷದ ಆದಿಲ್ ಅಹ್ಮದ್ ದಾರ್ನ ವೀಡಿಯೊವನ್ನು ಸಹ ಬಿಡುಗಡೆ ಮಾಡಿದರು. ಆತ ಒಂದು ವರ್ಷದ ಹಿಂದೆ ಭಯೋತ್ಪಾದಕರ ಗುಂಪಿಗೆ ಸೇರಿದ್ದ ಎಂದು ತಿಳಿದು ಬಂದಿದೆ.
ಭಾರತ ಹೇಗೆ ಪ್ರತಿಕ್ರಿಯಿಸಿತು ?
ಉಗ್ರರ ಅಟ್ಟಹಾಸಕ್ಕೆ ಉತ್ತರ ನೀಡಲು ಸಂಕಲ್ಪ ಮಾಡಿದ ಭಾರತ ವೈಮಾನಿಕ ದಾಳಿ ನಡೆಸಿತು. ಪಾಕಿಸ್ತಾನದ ಪಖ್ತುನ್ಖ್ವಾದಲ್ಲಿನ ಬಾಲಾಕೋಟ್ನಲ್ಲಿರುವ ಜೆಇಎಂ ತರಬೇತಿ ಶಿಬಿರಗಳ ಮೇಲೆ ಪುಲ್ವಾಮಾ ದಾಳಿಯ 12 ದಿನಗಳ ನಂತರ, ಅಂದ್ರೆ ಫೆಬ್ರವರಿ 26 ರಂದು ವೈಮಾನಿಕ ದಾಳಿ ನಡೆಸಿತ್ತು. ಈ ದಾಳಿಯ ಪರಿಣಾಮವಾಗಿ ಅಪಾರ ಸಂಖ್ಯೆಯಲ್ಲಿ ಜೈಷ್-ಎ-ಮೊಹಮ್ಮದ್ ಸಂಘಟನೆಯ 300ಕ್ಕೂ ಹೆಚ್ಚು ಉಗ್ರಗಾಮಿಗಳು ಸತ್ತರು.
ಪಾಕಿಸ್ತಾನದ ವಿಫಲ ಪ್ರಯತ್ನ
ಮರುದಿನ, ಫೆಬ್ರವರಿ 27 ರಂದು, ಭಾರತದ ಬಾಲಾಕೋಟ್ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ವಾಯುಪಡೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನಾ ಸ್ಥಾಪನೆಗಳ ಮೇಲೆ ದಾಳಿ ನಡೆಸಲು ಪ್ರಯತ್ನಿಸಿತು. ಆದರೆ ಐಎಎಫ್, ಪಾಕಿಸ್ತಾನದ ದಾಳಿಯನ್ನು ವಿಫಲಗೊಳಿಸಿತು.
ಕಾಳಗದ ವೇಳೆ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಅವರು ತಮ್ಮ MiG-21 ಬೈಸನ್ ಮೂಲಕ ಪಾಕಿಸ್ತಾನದ F-16 ಅನ್ನು ಹೊಡೆದುರುಳಿಸಿದರು. ಆದರೆ ವೈಮಾನಿಕ ಯುದ್ಧದ ಸಮಯದಲ್ಲಿ ಅವರ ಜೆಟ್ಗೆ ಹೊಡೆತ ಬಿದ್ದಿತ್ತು. ಅದರ ನಂತರ ವಿಂಗ್ ಕಮಾಂಡರ್ ಅವರನ್ನ ಸೆರೆಹಿಡಿಯಲಾಯಿತು. ನಂತರ ಅವರನ್ನು ಮಾರ್ಚ್ 1 ರಂದು ಬಿಡುಗಡೆ ಮಾಡಲಾಯಿತು. 2021 ರಲ್ಲಿ, ಅವರಿಗೆ ಶೌರ್ಯ ಪದಕವಾದ ವೀರ ಚಕ್ರವನ್ನು ನೀಡಲಾಯಿತು.