ಸುಲಭವಾಗಿ ಲೋನ್ ಸಿಗುತ್ತದೆ ಎನ್ನುವ ಆಮಿಷಕ್ಕೆ ಬೀಳುವ ಉದ್ಯಮಿಗಳು, ಕೋಟ್ಯಾಂತರ ರೂಪಾಯಿಗಳನ್ನು ಕಳೆದುಕೊಳ್ಳುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿವೆ. ಚಿನ್ನದ ಬಿಸ್ಕೆಟ್ ನೀಡುತ್ತೇವೆ ಎಂದು ಕೋಟ್ಯಾಂತರ ರೂಪಾಯಿ ವಂಚಿಸಿದ ಘಟನೆ ನಿಮಗೆ ನೆನಪಿರಲೆಬೇಕು. ಇದರ ನಡುವೆ ಕೋಟ್ಯಾಂತರ ರೂಪಾಯಿಯ ಲೋನ್ ಆಮಿಷಕ್ಕೆ ಬಿದ್ದ, ಉದ್ಯಮಿಯೊಬ್ಬರು ಒಂದು ಕೋಟಿ ರೂ. ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೌದು, ವಿನ್ಸನ್ ಎಂಬ ಮೈಸೂರಿನ ಗಾರ್ಮೆಂಟ್ ಫ್ಯಾಕ್ಟರಿ ಉದ್ಯಮಿಯೊಬ್ಬರು, ನನಗೆ ಒಂದು ಕೋಟಿ ವಂಚಿಸಿದ್ದಾರೆಂದು ಎಲೆಕ್ಟ್ರಾನಿಕ್ ಪೊಲೀಸರಿಗೆ ದೂರು ನೀಡಿದ ಮೇಲೆ ಈ ಘಟನೆ ಬೆಳಕಿಗೆ ಬಂದಿದೆ. ಮುಂಬೈ ಮೂಲದ ಇಬ್ಬರು ವ್ಯಕ್ತಿಗಳು ಅವರಿಗೆ ನೂರು ಕೋಟಿ ಲೋನ್ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಇದೇ ನೆಪದಲ್ಲಿ ಇಬ್ಬರು ಖದೀಮರು ವಿನ್ಸನ್ ಅವರೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದಾರೆ. ನಂತರ ಹಲವು ಫೈವ್ ಸ್ಟಾರ್ ಹೊಟೇಲ್ ಗಳಲ್ಲಿ ಮೀಟಿಂಗ್ ಸಹ ನಡೆಸಿದ್ದಾರೆ. ನೂರು ಕೋಟಿ ಮೊತ್ತದ ಲೋನ್ ಸಿಗಬೇಕಾದ್ರೆ ಇಂತಿಷ್ಟು ಖರ್ಚಾಗುತ್ತೆ ಅಂತಾ ಒಂದು ಕೋಟಿ ಪಡೆದು ವಂಚಿಸಿದ್ದಾರೆ ಎಂದು ವಿನ್ಸನ್ ದೂರು ನೀಡಿದ್ದಾರೆ.
ವಿನ್ಸನ್ ನೀಡಿದ ದೂರು ದಾಖಲಿಸಿಕೊಂಡ ಪೊಲೀಸರು, ತಕ್ಷಣವೇ ಕಾರ್ಯಪ್ರವೃತ್ತರಾಗಿ ಮುಂಬೈ ಮೂಲದ ಇಬ್ಬರನ್ನ ಬಂಧಿಸಿದ್ದಾರೆ. ಬಂಧಿತರನ್ನು ಸಂತೋಷ್, (36), ಸಂದೇಶ್ (45) ಎಂದು ಗುರುತಿಸಲಾಗಿದೆ. ಎರಡು ಸಾವಿರ ಮುಖಬೆಲೆಯ ಕೋಟ್ಯಾಂತರ ಹಣ ತೋರಿಸಿ ವಂಚಿಸಿದ್ದಾರೆ. ವಿನ್ಸನ್ ಗೆ ಹಣದ ಅವಶ್ಯಕತೆ ಇದೆ ಎಂದು ತಿಳಿದುಕೊಂಡೆ ಈ ಕೆಲಸ ಮಾಡಿದ್ದಾರೆ. ಸದ್ಯ ಆರೋಪಿಗಳನ್ನ ಬಂಧಿಸಿದ್ದೇವೆ, ಮುಂದಿನ ವಿಚಾರಣೆ ನಡೆಯುತ್ತಿದೆ ಎಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಮಾಹಿತಿ ನೀಡಿದ್ದಾರೆ.