ಗಂಡು ಮಗನೇ ನಮ್ಮನ್ನು ವಯಸ್ಸಾದಾಗ ನೋಡಿಕೊಳ್ಳುತ್ತಾನೆ ಅನ್ನೋ ನಂಬಿಕೆ ಏಷ್ಯಾ ಭಾಗದ ಜನರಲ್ಲಿ ಹೆಚ್ಚು. ಗಂಡು ಮಗುವೇ ಜನಿಸಲಿ ಎಂದು ನಾನಾ ರೀತಿಯ ಹರಕೆ ಹೊರುವ ಅನೇಕ ಮಂದಿಯಿದ್ದಾರೆ. ಆದರೆ ಗಂಡು ಮಗು ಜನಿಸಲೆಂದು ಹಣೆಗೆ ಮೊಳೆ ಹೊಡೆಸಿಕೊಂಡಿರುವವರ ಬಗ್ಗೆ ನೀವು ಕೇಳಿರುವುದಿಲ್ಲಾ. ನಂಬಲಾಸಾಧ್ಯವಾದರೂ ಇಂತದ್ದೊಂದು ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಈ ಘಟನೆ ಬಗ್ಗೆ ಪಾಕಿಸ್ತಾನದ ಸರ್ಕಾರಿ ಅಧಿಕಾರಿಗಳು ವೈದ್ಯರು ತಿಳಿಸಿದ್ದಾರೆ. ಡಾ. ಹೈದರ್ ಖಾನ್ ಮಹಿಳೆಗೆ ಚಿಕಿತ್ಸೆ ನೀಡಿದ ವೈದ್ಯ. ಅತಿಯಾದ ನೋವಿನಿಂದ ಬಳಲುತ್ತಿದ್ದ ಆಕೆಯನ್ನ ಪೇಶಾವರದ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆ ವೇಳೆ ಆಕೆಗೆ ಪ್ರಜ್ಞೆ ಇತ್ತು ಆದರೂ, ಅತಿಯಾದ ನೋವಿನಿಂದ ಬಳಲುತ್ತಿದ್ದರು. ವೈದ್ಯರ ಪ್ರಕಾರ ಆಕೆ ಮೊಳೆಯನ್ನ ತಾನೇ ತೆಗೆದು ಹಾಕಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಎಕ್ಸರೇ ತೆಗೆದು ನೋಡಿದಾಗ ಸುಮಾರು 2 ಇಂಚಿನ ಸಣ್ಣ ಮೊಳೆ ಅವರ ಹಣೆಗೆ ಹೊಡೆದಿರುವುದು ತಿಳಿದು ಬಂದಿದೆ. ಅದೃಷ್ಟವಶಾತ್, ಮೊಳೆ ಮಹಿಳೆಯ ಮಿದುಳಿಗೆ ತಾಕಿಲ್ಲ. ಹೀಗಾಗಿ ಇದರಿಂದ ಅವರ ಪ್ರಾಣಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಮಹಿಳೆ ಮೊದಲು ತಾನೇ ಮೊಳೆಯನ್ನು ಹೊಡೆದುಕೊಂಡಿರುವುದಾಗಿ ವಾದಿಸಿದ್ದಾರೆ. ಆದರೆ ಹಲವು ಬಾರಿ ಪ್ರಶ್ನಿಸಿದ ನಂತರ ನಿಜಾಂಶ ಬಾಯ್ಬಿಟ್ಟಿದ್ದಾರೆ. ಮಹಿಳೆಗೆ ಯಾವುದೇ ಮಾನಸಿಕ ಸಮಸ್ಯೆ ಇಲ್ಲ. ಆಕೆಗೆ ಈಗಾಗಲೇ ಮೂವರು ಹೆಣ್ಣುಮಕ್ಕಳಿದ್ದಾರೆ. ಈಗ ಮತ್ತೆ ಗರ್ಭಿಣಿಯಾಗಿದ್ದು, ಅದು ಗಂಡು ಮಗುವಾಗಲಿ ಎಂದು ಸ್ಥಳೀಯ ಇಸ್ಲಾಂ ಧರ್ಮಗುರು ಮತ್ತು ವಾಮಾಚಾರಿ ಚಿಕಿತ್ಸಕನೊಬ್ಬನ ಬಳಿ ಹೋಗಿದ್ದಾರೆ. ಆ ಚಿಕಿತ್ಸಕನೇ ಖುದ್ದಾಗಿ ಮೊಳೆ ಹೊಡೆದಿದ್ದಾನೆ ಎಂದು ಸತ್ಯ ಬಾಯ್ಬಿಟ್ಟಿದ್ದಾಳೆ. ಈ ಬಗ್ಗೆ ಸದ್ಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಆರೋಪಿಯನ್ನು ಹಿಡಿದು ವಿಚಾರಣೆಗೆ ಒಳಪಡಿಸಲು ಸಿದ್ಧವಾಗಿದ್ದಾರೆ. ಅದಕ್ಕೂ ಮೊದಲು ಮಹಿಳೆಯನ್ನು ವಿಚಾರಣೆಗೆ ಒಳಪಡಿಸುವುದಾಗಿ ಮಾಹಿತಿ ನೀಡಿದ್ದಾರೆ.