ಬೆಂಗಳೂರು: 2022 -23 ನೇ ಸಾಲಿನಿಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ಸರ್ಕಾರ ನಿರ್ಧರಿಸಿದ್ದು, ಎಲ್ಲಾ ಶಾಲೆಗಳಲ್ಲಿ NEP ಜಾರಿಯಾಗುವುದಿಲ್ಲ. 20,000 ಶಾಲೆಗಳಲ್ಲಿ ಮಾತ್ರ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗುತ್ತದೆ.
ಅಂಗನವಾಡಿ ಕೇಂದ್ರಗಳನ್ನು ಹೊಂದಿರುವ, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಎನ್ಇಪಿ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ. ಮುಂದಿನ ಶೈಕ್ಷಣಿಕ ಸಾಲಿನಿಂದ ಎಲ್ಲ ಶಾಲೆಗಳಲ್ಲಿಯೂ ಎನ್ಇಪಿ ಜಾರಿಯಾಗಲ್ಲ. ಎನ್ಇಪಿ ಜಾರಿಗೊಳಿಸುವ ಕುರಿತಂತೆ ಶಿಕ್ಷಣ ಇಲಾಖೆಯಲ್ಲಿ ಕಾಯ್ದೆ, ಕಾನೂನು, ಪಠ್ಯಕ್ರಮ ಸೇರಿದಂತೆ ಅನೇಕ ವಿಷಯಗಳ ತಿದ್ದುಪಡಿ ಆಗಬೇಕಿದೆ ಎಂದು ಹೇಳಲಾಗಿದೆ.
ಇನ್ನು ರಾಜ್ಯದಲ್ಲಿ ಎನ್ಇಪಿ ಜಾರಿಗೆ ಕ್ರಮಕೈಗೊಳ್ಳಲಾಗಿದ್ದರೂ, 2021 -22 ನೇ ಸಾಲಿನ ಬಜೆಟ್ನಲ್ಲಿ ಹಣ ನೀಡಿಲ್ಲ. ಕೇಂದ್ರ ಸರ್ಕಾರ ಕೂಡ ಈ ಸಾಲಿನ ಬಜೆಟ್ನಲ್ಲಿ ಹಣ ಘೋಷಣೆ ಮಾಡಿಲ್ಲ.
ಈ ಬಗ್ಗೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಮುಂದಿನ ಶೈಕ್ಷಣಿಕ ಸಾಲಿನಿಂದ 20,000 ಶಾಲೆಗಳಲ್ಲಿ ಎನ್ಇಪಿ ಜಾರಿಗೆ ಕ್ರಮಕೈಗೊಂಡಿದ್ದು, ಬಜೆಟ್ ನಲ್ಲಿ ಅನುದಾನ ನೀಡುವಂತೆ ಸಿಎಂಗೆ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.