ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಿ ಉಂಟಾದ ಲೋಪ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪ್ರಧಾನಿ ಮೋದಿ ಶುಕ್ರವಾರ ಅಲ್ಮೋರಾದಿಂದ ಪಾಟಿಯಾಲಿ ತಲುಪಿದಾಗ, ಅವರ ಫ್ಲೀಟ್ ನಲ್ಲಿರುವ ಆರೋಗ್ಯ ಇಲಾಖೆಯ ಆಂಬ್ಯುಲೆನ್ಸ್ ನಲ್ಲಿ ನಿಯೋಜಿಸಲಾಗಿದ್ದ ವೈದ್ಯರು ಗೈರುಹಾಜರಾಗಿದ್ದರು.
SPG ಕಮಾಂಡೋಗಳು ಆಂಬ್ಯುಲೆನ್ಸ್ ನಲ್ಲಿ ವೈದ್ಯರು ಕಾಣದಿದ್ದಾಗ, ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿದ್ದು, ನಂತರ ಕಾಣೆಯಾದ ವೈದ್ಯರನ್ನು ಹುಡುಕಲಾಗಿದೆ.
ಪ್ರಧಾನಿ ಮೋದಿಯವರ ಭದ್ರತಾ ಪ್ರೋಟೋಕಾಲ್ ಪ್ರಕಾರ, ಸ್ಥಳದಲ್ಲಿ ಆರು ಆಂಬ್ಯುಲೆನ್ಸ್ ಗಳನ್ನು ನಿಯೋಜಿಸಲಾಗಿತ್ತು. ಯಾವುದೇ ರೀತಿಯ ತುರ್ತು ಪರಿಸ್ಥಿತಿಗಾಗಿ ಪಕ್ಕದ ಜಿಲ್ಲೆಯ ಇಟಾಹ್ ನಿಂದ ಆಂಬ್ಯುಲೆನ್ಸ್ ಮತ್ತು ವೈದ್ಯರ ತಂಡವನ್ನು ಕರೆಸಲಾಗಿತ್ತು. ಇಟಾಹ್ ನ ವೈದ್ಯರ ತಂಡವನ್ನು ಪ್ರಧಾನ ಮಂತ್ರಿಯವರ ಫ್ಲೀಟ್‌ನಲ್ಲಿ ಸೇರಿಸಲಾಗಿದ್ದು, ಈ ತಂಡದಲ್ಲಿ ಶಸ್ತ್ರಚಿಕಿತ್ಸಕ ಡಾ. ಅಭಿನವ್ ಝಾ, ರೋಗ ತಜ್ಞ ಮಧುಪ್ ಕೌಶಲ್ ಮತ್ತು ಅರವಳಿಕೆ ತಜ್ಞ ಡಾ.ಆರ್.ಕೆ.ದಯಾಳ್ ಅವರಿದ್ದರು.
ವಾಯುಪಡೆಯ ಮೂರು ಹೆಲಿಕಾಪ್ಟರ್ ಗಳ ಫ್ಲೀಟ್ ನೊಂದಿಗೆ ಪ್ರಧಾನಿ ರ್ಯಾಲಿ ಸ್ಥಳವನ್ನು ತಲುಪಿದ್ದಾರೆ. ಇದರಲ್ಲಿ ಮೊದಲ ಹೆಲಿಕಾಪ್ಟರ್ 2:58 ಕ್ಕೆ ಇಳಿಯಿತು, ನಂತರ ಎರಡು ಮೂರು ನಿಮಿಷಗಳ ಮಧ್ಯಂತರದಲ್ಲಿ ಎರಡು ಹೆಲಿಕಾಪ್ಟರ್ ಗಳು ಬಂದವು. ಪ್ರಧಾನಿ ಮೋದಿಯವರ ಹೆಲಿಕಾಪ್ಟರ್ ಬಂದ ತಕ್ಷಣ ಫ್ಲೀಟ್ ಗೆ ಎಚ್ಚರಿಕೆ ನೀಡಲಾಗಿದೆ.
ಈ ವೇಳೆ SPG ಕಮಾಂಡೋಗಳು ಆಂಬ್ಯುಲೆನ್ಸ್ ನಲ್ಲಿ ವೈದ್ಯರ ತಂಡ ಇಲ್ಲದಿರುವುದನ್ನು ಕಂಡುಕೊಂಡಿದ್ದಾರೆ. ಈ ಬಗ್ಗೆ ಇತರೆ ಆಡಳಿತ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಕಾಣೆಯಾದ ವೈದ್ಯರನ್ನು ಹುಡುಕಿದಾಗ, ಅವರು ಫ್ಲೀಟ್ ಆಂಬ್ಯುಲೆನ್ಸ್‌ಗಳ ಬದಲಿಗೆ ಇತರ ಆಂಬ್ಯುಲೆನ್ಸ್ ಗಳಲ್ಲಿ ಕುಳಿತಿರುವುದು ಕಂಡುಬಂದಿದೆ. ಈ ಲೋಪವನ್ನು ಎಸ್‌ಪಿಜಿ ಗಂಭೀರವಾಗಿ ಪರಿಗಣಿಸಿದೆ.
ಪ್ರಧಾನಿ ಮೋದಿಯವರ ಫ್ಲೀಟ್‌ನಲ್ಲಿ ಒಳಗೊಂಡಿರುವ ಆಂಬ್ಯುಲೆನ್ಸ್‌ನ ವೈದ್ಯರು ಪಿಎಂ ಆಗಮನದ ಸಮಯದಲ್ಲಿ ಫ್ಲೀಟ್ ಆಂಬ್ಯುಲೆನ್ಸ್ ನಲ್ಲಿ ಇರಲಿಲ್ಲ, ಅವರು ಗೈರುಹಾಜರಾಗಿದ್ದರು. ಈ ಬಗ್ಗೆ ಮಾಹಿತಿ ನೀಡಿದ ಎಸ್‌ಪಿಜಿ ವರದಿ ಕೇಳಿದೆ. ಎಸ್ಪಿ ರೋಹನ್ ಪ್ರಮೋದ ಬೋತ್ರೆ, ಆಂಬ್ಯುಲೆನ್ಸ್ ನಲ್ಲಿ ನಿಯೋಜಿಸಲಾದ ಮೂವರು ವೈದ್ಯರ ವಿರುದ್ಧ ಸರ್ಕಾರಕ್ಕೆ ವರದಿಯನ್ನು ಕಳುಹಿಸಿದ್ದಾರೆ.
ಸಿಎಂಓ ಹೇಳಿದ್ದೇನು?
ಇಟಾಹ್ ನ ಮೂವರು ತಜ್ಞ ವೈದ್ಯರ ತಂಡವನ್ನು ಪ್ರಧಾನಿ ಮೋದಿಯವರ ಫ್ಲೀಟ್ ನಲ್ಲಿ ನಿಯೋಜಿಸಲಾಗಿದೆ ಎಂದು ಕಾಸ್ಗಂಜ್ ಸಿಎಂಒ ಡಾ.ಅನಿಲ್ ಕುಮಾರ್ ಹೇಳಿದ್ದಾರೆ. ಪ್ರಧಾನಿ ಬಂದಾಗ, ಫ್ಲೀಟ್‌ನ ಆಂಬ್ಯುಲೆನ್ಸ್‌ನ ವೈದ್ಯರು ಮತ್ತೊಂದು ಆಂಬ್ಯುಲೆನ್ಸ್ ನಲ್ಲಿ ಕುಳಿತಿದ್ದರು. ಕಾರ್ಯಕ್ರಮದ ವೇಳೆ ಎಲ್ಲ ವೈದ್ಯರು ಹಾಜರಿದ್ದು, ಕಾರ್ಯಕ್ರಮ ಮುಗಿದ ಬಳಿಕವೇ ತೆರಳಿದ್ದಾರೆ ಎಂದು ಹೇಳಲಾಗಿದೆ.