ಫ್ರೆಂಡ್ಶಿಪ್ ಕ್ಲಬ್ ಹೆಸರಿನಲ್ಲಿ ವ್ಯಕ್ತಿಯೋರ್ವನಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಮಹಿಳೆಯೋರ್ವಳನ್ನು ಪುಣೆ ನಗರದ ಸೈಬರ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ವಾನವಡಿಯ ಕಟ್ಕೆ ವಸ್ತಿ ನಿವಾಸಿ ದೀಪಾಲಿ ಕೈಲಾಸ್ ಶಿಂಧೆ (28) ಎಂದು ಗುರುತಿಸಲಾಗಿದೆ.
ಪುಣೆ ಮೂಲದ ಹಿರಿಯ ನಾಗರಿಕರೊಬ್ಬರು ತಮಗಾದ ವಂಚನೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ, ಘಟನೆ ಬೆಳಕಿಗೆ ಬಂದಿದೆ. ದೂರುದಾರರು ಪತ್ರಿಕೆಯೊಂದರಲ್ಲಿ ಪ್ರಕಟವಾದ ‘ಫ್ರೆಂಡ್ಶಿಪ್ ಕ್ಲಬ್’ ಒಂದರ ಜಾಹೀರಾತನ್ನು ನೋಡಿ ಜಾಹೀರಾತಿನಲ್ಲಿ ನಮೂದಿಸಲಾದ ಮೊಬೈಲ್ ಫೋನ್ ಸಂಖ್ಯೆಯನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಫ್ರೆಂಡ್ಶಿಪ್ ಕ್ಲಬ್ ಮೂಲಕ ಶ್ರೀಮಂತ ಮತ್ತು ಉನ್ನತ ಮಹಿಳೆಯರೊಂದಿಗೆ ದೈಹಿಕ ಸಂಬಂಧ ಬೆಳೆಸಿ ಹಣ ಸಂಪಾದಿಸಬಹುದು ಎಂದು ಆರೋಪಿಗಳು ಆ ವ್ಯಕ್ತಿಗೆ ತಿಳಿಸಿದ್ದಾರೆ.
IPL ಮೆಗಾ ಹರಾಜು: ಇತಿಹಾಸದಲ್ಲೇ 2ನೇ ದುಬಾರಿ ಆಟಗಾರನಾಗಿ ಹೊರಹೊಮ್ಮಿದ ಇಶಾನ್ ಕಿಶನ್, 15.25 ಕೋಟಿಗೆ MI ಗೆ ಮಾರಾಟ
ಅಷ್ಟೇ ಅಲ್ಲಾ ಮೊದಲು ಅವರನ್ನ ಭೇಟಿಯಾಗಲೂ ಅವಕಾಶವಿದೆ. ಆದರೆ ಅದಕ್ಕೆ ಭದ್ರತಾ ಶುಲ್ಕವಾಗಿ ಹಣವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿ, ಮೊತ್ತವನ್ನು ವರ್ಗಾಯಿಸಲು ಬ್ಯಾಂಕ್ ಖಾತೆ ಸಂಖ್ಯೆಯನ್ನು ನೀಡಲಾಗಿದೆ. ಆರಂಭದಲ್ಲಿ 2 ಲಕ್ಷ ರೂ.ಗಳನ್ನು ವರ್ಗಾಯಿಸಿದ್ದಾರೆ. ಮತ್ತಷ್ಟು ಹಣದಾಸೆಗೆ ಬಿದ್ದ ವಂಚಕರು ವಿವಿಧ ಉದ್ದೇಶಗಳಿಗಾಗಿ ಹೆಚ್ಚಿನ ಹಣವನ್ನು ವರ್ಗಾಯಿಸುವಂತೆ ಮಾಡಿದ್ದಾರೆ. ಹೀಗೆ ಅವರ ಬಳಿಯಿಂದ 60.02 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾರೆ ಎಂದು ಪುಣೆ ಪೊಲೀಸರು ತಿಳಿಸಿದ್ದಾರೆ.
ನಂತರ ತಮಗಾದ ವಂಚನೆ ಬಗ್ಗೆ ತಿಳಿದ ಆ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿ ಎಫ್ಐಆರ್ ದಾಖಲಿಸಿಕೊಂಡ ಪುಣೆ ಸಿಟಿಯ ಪೊಲೀಸರು, ಹಿರಿಯ ಇನ್ಸ್ಪೆಕ್ಟರ್ ಡಿ ಎಸ್ ಹಕೆ, ಇನ್ಸ್ಪೆಕ್ಟರ್ ಸಂಗೀತಾ ಮಾಲಿ ಮತ್ತು ಸಬ್ ಇನ್ಸ್ಪೆಕ್ಟರ್ ಅಮೋಲ್ ವಾಘಮಾರೆ ಅವರಿದ್ದ ಸೈಬರ್ ಪೊಲೀಸರ ತಂಡಕ್ಕೆ ತನಿಖೆ ವರ್ಗಾಯಿಸಿದ್ದಾರೆ. ಈ ತನಿಖೆಯಲ್ಲಿ, ದೀಪಾಲಿ ಬಗ್ಗೆ ತಿಳಿದುಬಂದಿದೆ. ಶುಕ್ರವಾರ ಪೊಲೀಸ್ ತಂಡವೊಂದು, ವನವಾಡಿಯಿಂದ ಆಕೆಯನ್ನು ಬಂಧಿಸಿದೆ.
ಮುಂದಿನ ತನಿಖೆಗಾಗಿ ನ್ಯಾಯಾಲಯವು ಆರೋಪಿಯನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಆರೋಪಿ ದೀಪಾಲಿ, ಮೀನಾಕ್ಷಿ ಫ್ರೆಂಡ್ ಶಿಪ್ ಕ್ಲಬ್ ಗೆ ಟೆಲಿಕಾಲರ್ ಆಗಿ ಕೆಲಸ ಮಾಡುತ್ತಿದ್ದಳು. ಅಲ್ಲದೆ, ದೂರುದಾರರಿಂದ ವಂಚಿಸಿದ ಮೊತ್ತವನ್ನು ಆಕೆಯ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ. ಅಪರಾಧದ ಮಾಸ್ಟರ್ಮೈಂಡ್ಗಳನ್ನು ಬಂಧಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ, ಎಂದು ಇನ್ಸ್ಪೆಕ್ಟರ್ ಹಕೆ ತಿಳಿಸಿದ್ದಾರೆ.