ಕೊರೊನಾ ನಂತ್ರ ಅನೇಕರು ಬೀದಿಗೆ ಬಿದ್ದಿದ್ದಾರೆ. ಅನೇಕರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಕೋವಿಡ್ ಆರಂಭವಾದ ಎರಡು ವರ್ಷಗಳ ನಂತರ ಕೇರಳದ ಕಾಂಟ್ರಾಕ್ಟ್ ಕ್ಯಾರೇಜ್ ಮಾಲೀಕರ ಸಂಘ ತೀವ್ರ ಸಂಕಷ್ಟದಲ್ಲಿದೆ. ಬಸ್ ಮಾಲೀಕರು, ಕೆಜಿ ಲೆಕ್ಕದಲ್ಲಿ ಬಸ್ ಮಾರಾಟಕ್ಕೆ ಮುಂದಾಗಿದ್ದಾರೆ.
ಇಂದು ಕೊಚ್ಚಿಯಲ್ಲಿ ಬಸ್ ಗಳನ್ನು ಮಾರಾಟ ಮಾಡಲಾಗಿದೆ. 10 ಐಷಾರಾಮಿ ಬಸ್ಗಳನ್ನು ಕೆಜಿಗೆ 45 ರೂಪಾಯಿಯಂತೆ ಮಾರಾಟ ಮಾಡಿದ್ದಾರೆ.
ಸಿಸಿಒಎ ಸದಸ್ಯ ಹಾಗೂ ಕೊಚ್ಚಿ ನಿವಾಸಿ ರಾಯ್ಸನ್ ಜೋಸೆಫ್ ತಮ್ಮ ಪರಿಸ್ಥಿತಿಯನ್ನು ಮಾಧ್ಯಮಗಳ ಮುಂದೆ ತೋಡಿಕೊಂಡಿದ್ದಾರೆ. ಕೊರೊನಾ ಮೊದಲು ಸುಮಾರು 20 ಬಸ್ ಗಳಿತ್ತು. ಆದ್ರೆ ಈಗ 10 ಬಸ್ ಉಳಿದಿದೆ. 40 ಆಸನಗಳ ಐಷಾರಾಮಿ ಬಸ್ ಬೆಲೆ 50 ಲಕ್ಷ ರೂಪಾಯಿ. ಆದ್ರೆ ಅನಿವಾರ್ಯ ಕಾರಣದಿಂದಾಗಿ ಈ ಬಸ್ ಗಳನ್ನು ಕೆಜಿ ಲೆಕ್ಕದಲ್ಲಿ ಮಾರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ.
ಪೊಲೀಸರಿಂದ ಅನಗತ್ಯ ತೊಂದರೆಯಾಗ್ತಿದೆ ಎಂದು ಜೋಸೆಫ್ ದೂರಿದ್ದಾರೆ. ಬಸ್ ಗಳಿಗೆ 44 ಸಾವಿರ ರೂಪಾಯಿ ತೆರಿಗೆ ಪಾವತಿ ಮಾಡ್ತಿದ್ದು, ಸುಮಾರು 88 ಸಾವಿರ ರೂಪಾಯಿ ವಿಮೆ ಕಟ್ಟಬೇಕಿದೆ. ಕಳೆದ ಭಾನುವಾರ ಲಾಕ್ಡೌನ್ ಜಾರಿಗೊಳಿಸಿದ ಸಂದರ್ಭದಲ್ಲಿ ಮೊದಲೇ ಕಾಯ್ದಿರಿದ್ದ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದ್ದರೂ ಪೊಲೀಸರು 2000 ರೂಪಾಯಿ ವಸೂಲಿ ಮಾಡಿದ್ದರಂತೆ. ಇದು ಮತ್ತಷ್ಟು ಹೊರೆ ನೀಡ್ತಿದೆ ಎಂದವರು ಹೇಳಿದ್ದಾರೆ.
ಕೇರಳದಲ್ಲಿ ಸಿಸಿಒಎಯಲ್ಲಿ 3,500 ಸದಸ್ಯರಿದ್ದಾರೆ. ಅವರು ಸುಮಾರು 14,000 ಬಸ್ಗಳನ್ನು ಹೊಂದಿದ್ದಾರೆ. ಸರ್ಕಾರ ತೆರಿಗೆ ವಿನಾಯಿತಿ ಮಾಡಿದೆಯಂತೆ. ಆದ್ರೆ ಇದು ಸಾಲುತ್ತಿಲ್ಲವೆಂದು ಸಿಸಿಒಎ ಸದಸ್ಯರು ಹೇಳಿದ್ದಾರೆ. ಬಸ್ ಮಾರಾಟ ಮಾಡ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಅನೇಕ ಮಾಲೀಕರು ಬಸ್ ಮಾರಾಟ ಮಾಡಿದ್ದಾರೆ.