ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದದ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯಿಸಿರುವ ವಿಶ್ವದ ದೊಡ್ಡಣ್ಣ ಅಮೇರಿಕಾ, ಹಿಜಾಬ್ ಬ್ಯಾನ್ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಅಮೆರಿಕಾದ ರಾಯಭಾರಿ ರಶದ್ ಹುಸೇನ್, ಶಾಲೆಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನ ನಿಷೇಧಿಸುವುದು ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ, ಎಂದು ಟ್ವೀಟ್ ಮಾಡಿದ್ದಾರೆ.
ಧಾರ್ಮಿಕ ಸ್ವಾತಂತ್ರ್ಯವು ಧಾರ್ಮಿಕ ಉಡುಪನ್ನು ಆಯ್ಕೆ ಮಾಡುವ ಸಾಮರ್ಥ್ಯವನ್ನು ಒಳಗೊಂಡಿದೆ. ಭಾರತದ ಕರ್ನಾಟಕ ರಾಜ್ಯವು ಧಾರ್ಮಿಕ ಉಡುಪುಗಳನ್ನು ನಿರ್ಧರಿಸಬಾರದು. ಶಾಲೆಗಳಲ್ಲಿ ಹಿಜಾಬ್ ನಿಷೇಧವು ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುವುದಷ್ಟೇ ಅಲ್ಲದೆ, ಮಹಿಳೆಯರು ಮತ್ತು ಹುಡುಗಿಯರನ್ನು ಕಡೆಗಣಿಸುತ್ತದೆ,” ಎಂದು ರಶದ್ ಹುಸೇನ್ ಟ್ವೀಟ್ ಮಾಡಿದ್ದಾರೆ.
BIG NEWS: ಬೆಂಗಳೂರು ಶಾಲೆಗೂ ಕಾಲಿಟ್ಟ ಹಿಜಾಬ್ ಸಂಘರ್ಷ; ಚಂದ್ರಾಲೇಔಟ್ ಶಾಲೆಯಲ್ಲಿ ಹೈಡ್ರಾಮಾ
ಅಧ್ಯಕ್ಷ ಜೋ ಬಿಡೆನ್ ಅವರ ಆಡಳಿತವು ಕಳೆದ ವರ್ಷ ಇಂಡಿಯನ್-ಅಮೆರಿಕನ್ ಅಟಾರ್ನಿ, ಹುಸೇನ್ ಅವರನ್ನು ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಅಮೆರಿಕಾದ ರಾಯಭಾರಿಯಾಗಿ ನೇಮಿಸಿದೆ. ರಶದ್, ಕರ್ನಾಟಕದ ಹಿಜಾಬ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಅಮೇರಿಕಾದ ಮೊದಲ ಸರ್ಕಾರಿ ಅಧಿಕಾರಿ.
ರಶದ್ ಹುಸೇನ್ ಅವರು ರಾಯಭಾರಿಯಾಗಿರುವ ದಿ ಮಿನಿಸ್ಟೇರಿಯಲ್ ಟು ಅಡ್ವಾನ್ಸ್ ರಿಲಿಜಿಯಸ್ ಫ್ರೀಡಂ ಸಚಿವಾಲಯವು, ಈ ಹಿಂದೆಯೂ ಭಾರತದಲ್ಲಿನ ಕೋಮು ಉದ್ವಿಗ್ನತೆಗಳ ಬಗ್ಗೆ ಪ್ರತಿಕ್ರಿಯೆಗಳನ್ನು ನೀಡಿತ್ತು. ಅಧ್ಯಕ್ಷ ಜೋ ಬಿಡೆನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಸಹ, ಕಳೆದ ವರ್ಷ ಪ್ರಧಾನಿ ಭೇಟಿಯ ಸಂದರ್ಭದಲ್ಲಿ, ಭಾರತ ದೇಶದಲ್ಲಾಗುತ್ತಿರುವ ಕೋಮು ಉದ್ವಿಗ್ನಗಳ ಬಗ್ಗೆ ತಿಳಿಸಲು ಪ್ರಯತ್ನಿಸಿದ್ದರು ಎಂದು ವರದಿಯಾಗಿದೆ.