ಈಗಾಗಲೇ ಪಂಚರಾಜ್ಯ ಚುನಾವಣೆಗಳ ಪೈಕಿ ಬಹಳ ಮಹತ್ವದ್ದಾಗಿರುವ ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ ಮುಗಿದಿದೆ. ಸುಮಾರು 60% ಮತದಾರರು ಹಕ್ಕು ಚಲಾಯಿಸಿದ್ದಾರೆ.
ಆದರೆ, ಇದೇ ವೇಳೆ ಎರಡನೇ ಹಂತದ ಮತದಾನ ನಡೆಯುವ ಅಮ್ರೋಹಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಹಿರಿಯ ಮುಖಂಡರಾದ ಸಲೀಮ್ ಖಾನ್ ಅವರ ಈ ನಿರ್ಧಾರ ಕಾಂಗ್ರೆಸ್ಗೆ ಭಾರಿ ಮುಖಭಂಗ ಉಂಟುಮಾಡಿದೆ.
ಫೆ.14 ರಂದು ಮತದಾನ ನಡೆಯಲಿದ್ದು, ಸುಮಾರು 55 ವಿಧಾನಸಭೆ ಕ್ಷೇತ್ರಗಳಲ್ಲಿ 586 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 9 ಕ್ಷೇತ್ರಗಳು ಮೀಸಲಾತಿ ಕ್ಷೇತ್ರಗಳಾಗಿವೆ.
ಅಖಿಲೇಶ್ ಯಾದವ್ ಅವರು ಇತ್ತೀಚೆಗೆ ರಾಮ್ಪುರಕ್ಕೆ ಆಗಮಿಸಿದಾಗ ಸಲೀಮ್ ಖಾನ್ ಅವರು ಬೆಂಬಲಿಗರ ಜತೆಗೆ ತೆರಳಿ ಎಸ್.ಪಿ. ಸೇರ್ಪಡೆ ಆಗಿದ್ದಾರೆ. ಅಮ್ರೋಹಾದ ಸಾದರ್ನಿಂದ ಕಾಂಗ್ರೆಸ್ ಟಿಕೆಟ್ ಪಡೆದು ಸಲೀಮ್ ಅವರು ಕಣಕ್ಕಿಳಿದಿದ್ದರು.
ಸಹರನ್ಪುರ, ಬಿಜ್ನೊರ್, ಅಮ್ರೋಹಾ (ಜೆಪಿ ನಗರ), ಮೊರಾದಾಬಾದ್, ಬರೇಲಿ, ರಾಮ್ಪುರ, ಸಂಭಾಲ್ (ಭೀಮ್ ನಗರ), ಬಡೌನ್, ಶಾಹಜಹಾನ್ಪುರ ಜಿಲ್ಲೆಗಳಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಈ ಬಾರಿ ನೇರ ಹಣಾಹಣಿ ಇದೆ.