ಶಿವಮೊಗ್ಗ: ಸಾಮಾಜಿಕ ಜಾಲತಾಣದ ಮೂಲಕ ವಿದ್ಯಾರ್ಥಿನಿಗೆ ಪರಿಚಿತನಾದ ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ ಬೆತ್ತಲೆ ಫೋಟೋ ಪಡೆದುಕೊಂಡು ಬ್ಲಾಕ್ ಮೇಲ್ ಮಾಡಿದ್ದ ಬಗ್ಗೆ ವಿದ್ಯಾರ್ಥಿನಿ ಸೈಬರ್ ಕ್ರೈಂ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಉತ್ತರ ಕನ್ನಡ ಜಿಲ್ಲೆ ಕಾರವಾರದ ಸಂತೋಷ್ ಎಂಬುವನ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿದೆ. ಫೇಸ್ಬುಕ್ ಮೂಲಕ ಪರಿಚಿತನಾಗಿದ್ದ ಸಂತೋಷ್ ವಿದ್ಯಾರ್ಥಿನಿಯ ಮೊಬೈಲ್ ನಂಬರ್ ಪಡೆದುಕೊಂಡಿದ್ದ. ಇಬ್ಬರ ನಡುವೆ ಚಾಟಿಂಗ್ ನಡೆದಿದ್ದು, ನಂತರ ಗೆಳೆತನವಾಗಿ ಪ್ರೀತಿಗೆ ತಿರುಗಿದೆ. ವಿದ್ಯಾರ್ಥಿನಿಯನ್ನು ಮದುವೆಯಾಗಿ ನಂಬಿಸಿದ್ದ ಸಂತೋಷ್ ಬೆತ್ತಲೆ ಫೋಟೋ ಮತ್ತು ವಿಡಿಯೋ ಕಳುಹಿಸುವಂತೆ ಕೇಳಿಕೊಂಡಿದ್ದ.
ಮದುವೆಯಾಗುವುದಾಗಿ ನಂಬಿಸಿದ್ದರಿಂದ ಆತನ ಸೂಚನೆಯಂತೆ ವಿದ್ಯಾರ್ಥಿನಿ ಬೆತ್ತಲೆ ಫೋಟೋವನ್ನು ಕಳುಹಿಸಿದ್ದಾಳೆ. ಆದರೆ, ಅಂತಹ ಫೋಟೋ, ವಿಡಿಯೋ ನೋಡುವುದನ್ನೇ ರೂಢಿಸಿಕೊಂಡ ಸಂತೋಷ್ ಮತ್ತೆ ಮತ್ತೆ ಬೇರೆ ಬೇರೆ ಭಂಗಿಗಳಲ್ಲಿ ಬೆತ್ತಲೆ ಫೋಟೋ ಮತ್ತು ವಿಡಿಯೋ ಕಳುಹಿಸಬೇಕೆಂದು ಬಲವಂತ ಮಾಡಿದ್ದಾನೆ. ಈತನ ಕಾಟ, ಒತ್ತಡ ಸಹಿಸಲಾರದೆ ವಿದ್ಯಾರ್ಥಿನಿ ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಾಳೆ. ನಂತರ ಸಂತೋಷ್ ವಿದ್ಯಾರ್ಥಿನಿ ಮತ್ತು ಆಕೆಯ ತಾಯಿ ಮೊಬೈಲ್ ಗೆ ಬೆತ್ತಲೆ ಫೋಟೋ ಮತ್ತು ವಿಡಿಯೋಗಳನ್ನೂ ಕಳುಹಿಸಿದ್ದಾನೆ. ನೊಂದ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.