ಹುಬ್ಬಳ್ಳಿ: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದ ಬೆನ್ನಲ್ಲೇ ರಾಜ್ಯ ಸರ್ಕಾರ ಶಾಲಾ-ಕಾಲೇಜಿಗೆ ರಜೆ ಘೋಷಣೆ ಮಾಡಿದ ಕ್ರಮ ಸರಿಯಲ್ಲ, ಸರ್ಕಾರ ತನ್ನ ಜವಾಬ್ದಾರಿಯಿಂದ ವಿಮುಖವಾದಂತಾಗಿದೆ ಎಂದು ವಿಧಾನಪರಿಷತ್ ಸ್ಪೀಕರ್ ಬಸವರಾಜ್ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿವಾದದ ಹಿಂದೆ ಕೆಲ ಸಂಘಟನೆಗಳ ಕೈವಾಡವಿದೆ. ಕೆಲ ಸಂಘಟನೆಗಳು ರಾಜಕೀಯ ನಾಯಕರ ಸಂಬಂಧಿಕರಿರುತ್ತಾರೆ. ಕುಮ್ಮಕ್ಕು ನೀಡಿ ಇಂತಹ ಗೊಂದಲ ಸೃಷ್ಟಿಸುತ್ತಾರೆ. ರಾಮನ ಭಕ್ತರೇ ಇರಲಿ, ಹನುಮನ ಭಕ್ತರೇ ಇರಲಿ ಮಕ್ಕಳ ಜತೆ ರಾಜಕೀಯ ಮಾಡುವುದು ಸರಿಯಲ್ಲ ಎಂದು ಗುಡುಗಿದರು.
BIG NEWS: ಹಿಜಾಬ್ ವಿವಾದ; ತುರ್ತು ವಿಚಾರಣೆಗೆ ಮತ್ತೆ ನಿರಾಕರಿಸಿದ ಸುಪ್ರೀಂ ಕೋರ್ಟ್; ಕಿವಿಮಾತು ಹೇಳಿದ ನ್ಯಾಯಾಲಯ
ಜವಾಬ್ದಾರಿಯಿಂದ ವರ್ತಿಸಬೇಕಾದ ಸಮಾಜದ ಮುಖಂಡರು, ಜನಪ್ರತಿನಿಧಿಗಳು ನಮ್ಮ ಊರು, ನಮ್ಮ ಜಿಲ್ಲೆಯ ಮಕ್ಕಳು ಎಂಬುದನ್ನು ಮರೆತುಬಿಟ್ಟಿದ್ದಾರೆ. ಇಂತಹ ಘಟನೆಗಳು ನಡೆಯುವುದೂ ಒಂದೇ ಕೊಲೆಗಳು ನಡೆಯುವೂದೂ ಒಂದೇ ಎಂದು ಬೇಸರ ವ್ಯಕ್ತಪಡಿಸಿದರು.
ಶಾಲಾ-ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ರಾಜಕೀಯಮಯವಾಗುತ್ತಿದ್ದರೂ ಸರ್ಕಾರಕ್ಕೆ ಗಂಭೀರತೆ ಬೇಡವೇ? ಶಿಕ್ಷಣ ಸಚಿವರು ಶಾಲಾ-ಕಾಲೇಜಿಗೆ ರಜೆ ನೀಡಿ ಸುಮ್ಮನೇ ಆರಾಮವಾಗಿ ಕುಳಿತರೆ ಹೇಗೆ? ಕೋರ್ಟ್ ನಿಂದ ತೀರ್ಪು ಬಂದರೂ ಕೂಡ ಮಕ್ಕಳಲ್ಲಿ ವಿಷ ಹಾಗೇ ಇರುತ್ತದೆ. ಒಂದು ವೇಳೆ ಈ ವಿಚಾರವಾಗಿ ಸಿಎಂ ನನಗೆ ಉಸ್ತುವಾರಿ ಕೊಟ್ಟರೂ ಸಮರ್ಥವಾಗಿ ನಿಭಾಯಿಸುತ್ತೇನೆ. ಪೋಷಕರು, ಶಾಲಾ-ಕಾಲೇಜು ಆಡಳಿತ ಮಂಡಳಿ, ಶಿಕ್ಷಣ ಸಚಿವರು ಸಭೆ ನಡೆಸಿ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.