ಒಂಬತ್ತು ವರ್ಷದ ಶಾಲಾ ಬಾಲಕಿಯ ತಲೆಯ ಮೇಲೆ ಮರದ ಕೊಂಬೆ ಬಿದ್ದ ಪರಿಣಾಮ ಉಂಟಾದ ಪೆಟ್ಟಿನಿಂದಾಗಿ 701 ದಿನಗಳ ಕಾಲ ಕೋಮಾದಲ್ಲಿದ್ದಾಕೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.
2020ರ ಮಾರ್ಚ್ 11 ರಂದು ಸ್ಕೂಟರ್ನಲ್ಲಿ ತನ್ನ ತಂದೆ ವೈ. ರಾಜು ಜೊತೆಯಲ್ಲಿ ಸ್ಕೂಟರ್ ಏರಿ ಶಾಲೆಯ ಕಡೆಗೆ ತೆರಳುತ್ತಿದ್ದ ವೇಳೆಯಲ್ಲಿ ರಾಶೆಲ್ ಪ್ರಿಶಾ ಅವರ ತಲೆಯ ಮೇಲೆ ಮರದ ಕೊಂಬೆ ಬಿದ್ದಿತ್ತು. ಬೆಂಗಳೂರಿನ ರಾಮಮೂರ್ತಿ ನಗರದ ಜನನಿಬಿಡದ ಪ್ರದೇಶದ ಟಿ.ಸಿ. ಪಾಳ್ಯದ ಮುಖ್ಯ ರಸ್ತೆಯಲ್ಲಿ ಈ ಅವಘಡ ಸಂಭವಿಸಿತ್ತು.
ಗಾಯಗೊಂಡಿದ್ದ ಪ್ರಿಶಾರನ್ನು ಕೂಡಲೇ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈಕೆಯ ಪ್ರಾಣವನ್ನು ರಕ್ಷಿಸಲು ವೈದ್ಯರು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದರು. ಅಪಘಾತಕ್ಕೊಳಗಾದ ಕೆಲವೇ ಗಂಟೆಗಳಲ್ಲಿ ಪ್ರಿಶಾ ಪ್ರಜ್ಞಾಹೀನ ಸ್ಥಿತಿಯನ್ನು ತಲುಪಿದ್ದಳು. ಈಕೆಯನ್ನು ಒಂದು ವರ್ಷಗಳ ಕಾಲ ಐಸಿಯುವಿನಲ್ಲಿ ಇಡಲಾಗಿತ್ತು. ಬಳಿಕ ಆಕೆಯನ್ನು ವಾರ್ಡ್ನಲ್ಲಿ ಇರಿಸಲಾಗಿತ್ತು. ಮಂಗಳವಾರ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಇನ್ನು ಬಾಲಕಿ ಮೃತಪಟ್ಟ ವಿಚಾರವಾಗಿ ಸಂತಾಪ ಸೂಚಿಸಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಆಕೆ ಶೀಘ್ರದಲ್ಲಿಯೇ ಮೊದಲಿನಂತಾಗಬೇಕೆಂದು ನಾನು ದೇವರಲ್ಲಿ ಪ್ರಾರ್ಥಿಸುತ್ತಿದ್ದೆ. ಆದರೆ ಆಕೆಯ ನಿಧನದ ವಾರ್ತೆಯನ್ನು ಕೇಳಿದ ಬಳಿಕ ನಾನು ಆಘಾತಕ್ಕೊಳಗಾಗಿದ್ದೇನೆ. ಈ ದುಃಖದ ಸಂದರ್ಭದಲ್ಲಿ ನಾನು ಆಕೆಯ ಕುಟುಂಬದ ಜೊತೆ ನಿಲ್ಲುತ್ತೇನೆ ಹಾಗೂ ಆಕೆಯ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಬಿಬಿಎಂಪಿ ಎಚ್ಚರ ವಹಿಸಬೇಕಿದೆ ಎಂದು ಟ್ವೀಟಾಯಿಸಿದ್ದಾರೆ.