ನೋಯ್ಡಾ: ಉತ್ತರ ಪ್ರದೇಶದಲ್ಲಿ ಅತ್ಯಂತ ತೀವ್ರ ಪೈಪೋಟಿಯ ಚುನಾವಣಾ ಕದನಕ್ಕೆ ಮತದಾನ ನಡೆಯುತ್ತಿದೆ. ಈ ವೇಳೆ ನೋಯ್ಡಾದಲ್ಲಿ ವ್ಯಕ್ತಿಯೊಬ್ಬರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಂತೆ ಖಾವಿ ಉಡುಪು ಧರಿಸಿ ಬಂದಿದ್ದು, ಎಲ್ಲರ ಗಮನ ಸೆಳೆದಿದೆ.
ಪಶ್ಚಿಮ ಉತ್ತರ ಪ್ರದೇಶದ 11 ಜಿಲ್ಲೆಗಳನ್ನು ಒಳಗೊಂಡ ಏಳು ಹಂತದ ಚುನಾವಣೆಯ ಮೊದಲ 58 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ನಡೆದಿದ್ದು, 6 ಗಂಟೆಗೆ ಮುಕ್ತಾಯವಾಗಿದೆ.
ಶಾಮ್ಲಿ, ಮೀರತ್, ಹಾಪುರ್, ಮುಜಾಫರ್‌ನಗರ, ಬಾಗ್‌ಪತ್, ಗಾಜಿಯಾಬಾದ್, ಬುಲಂದ್‌ಶಹರ್, ಅಲಿಗಢ, ಆಗ್ರಾ, ಗೌತಮ್ ಬುದ್ಧ ನಗರ ಮತ್ತು ಮಥುರಾ ಸೇರಿದಂತೆ 11 ಜಿಲ್ಲೆಗಳಲ್ಲಿ ಮತದಾನ ನಡೆದಿದೆ. ಈ ವೇಳೆ ವ್ಯಕ್ತಿಯೊಬ್ಬರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಂತೆ ಉಡುಪಿನಲ್ಲಿ ಮತದಾನಕ್ಕೆ ಬಂದಿದ್ದು ಎಲ್ಲರ ಗಮನ ಸೆಳೆದಿದೆ.
ರಾಜು ಕೊಹ್ಲಿ ಎಂಬುವವರು ನೋಯ್ಡಾ ಸೆಕ್ಟರ್-11ರ ಮತಗಟ್ಟೆಯೊಂದಕ್ಕೆ ಕೇಸರಿ ಬಟ್ಟೆಯನ್ನು ಧರಿಸಿ ತನ್ನ ಬೋಳು ತಲೆಯನ್ನು ಪ್ರದರ್ಶಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅವರ ವಿಶಿಷ್ಟ ವೇಷಭೂಷಣವು ಶೀಘ್ರದಲ್ಲೇ ಅಲ್ಲಿದ್ದ ಮತದಾರರನ್ನು ಆಕರ್ಷಿಸಿದೆ. ಅಲ್ಲಿದ್ದ ಜನರು ಅವರೊಂದಿಗೆ ಸೆಲ್ಫಿಗಳನ್ನು ಕ್ಲಿಕ್ಕಿಸಲು ಮುಗಿಬಿದ್ದಿದ್ದರು. ಹೀಗಾಗಿ ಸ್ಥಳದಲ್ಲಿ ನೂಕುನುಗ್ಗಲು ಉಂಟಾಯಿತು.
ಇನ್ನೊಂದೆಡೆ, ಮುಜಾಫರ್‌ನಗರದಲ್ಲಿ ವರನೊಬ್ಬ ಮತದಾನ ಚಲಾಯಿಸಿದ ನಂತರ ವಿವಾಹ ಸ್ಥಳಕ್ಕೆ ತೆರಳಿದ್ದು, ಸುದ್ದಿಯಾಗಿದ್ದಾನೆ.