ಬಸ್ಸಿನಲ್ಲಿ ಪ್ರಯಾಣಿಸಲು ಹುಂಜವೊಂದಕ್ಕೆ ಬಸ್ ಟಿಕೆಟ್ ನೀಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಸರ್ಕಾರಿ ಸ್ವಾಮ್ಯದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಟಿಎಸ್‌ಆರ್‌ಟಿಸಿ) ಬಸ್‌ನಲ್ಲಿ ಪ್ರಯಾಣಿಸಲು ಹುಂಜಕ್ಕೆ 30 ರೂ. ಚಾರ್ಜ್ ಮಾಡಲಾಗಿದೆ.
ಘಟನೆಯ ವಿವರ ನೋಡುವುದಾದರೆ, ಮಂಗಳವಾರ ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ಪ್ರಯಾಣಿಕರೊಬ್ಬರು ಟಿಎಸ್‌ಆರ್‌ಟಿಸಿ ಬಸ್ಸಿನಲ್ಲಿ ಹುಂಜವನ್ನು ಹೊತ್ತೊಯ್ಯುತ್ತಿದ್ದರು. ಆ ಪ್ರಯಾಣಿಕನಿಗೆ ಕಂಡಕ್ಟರ್ ಜಿ.ತಿರುಪತಿ ಅವರು ಸುಲ್ತಾನಾಬಾದ್‌ನಲ್ಲಿ ಟಿಕೆಟ್ ವಿತರಿಸಿದ್ದಾರೆ. ಆ ವ್ಯಕ್ತಿ ಪೆದ್ದಪಲ್ಲಿಯಿಂದ ಕರೀಂನಗರಕ್ಕೆ ಟಿಕೆಟ್ ಪಡೆದಿದ್ದಾನೆ. ಪ್ರಯಾಣದ ಅರ್ಧದಾರಿಯಲ್ಲಿ ಆತ, ಹುಂಜವನ್ನು ಬಟ್ಟೆಯಲ್ಲಿ ಸುತ್ತಿ ಬಚ್ಚಿಟ್ಟಿರುವುದನ್ನು ಕಡಕ್ಟರ್ ಗಮನಿಸಿದ್ದಾರೆ.
ರೈತರೊಬ್ಬರ ‘ಜನಧನ್’ ಖಾತೆಗೆ 15ಲಕ್ಷ ಜಮಾ; ಕನಸಿನ ಮನೆಯನ್ನು ಕಟ್ಟಿಸಿ ಸಂಕಷ್ಟದಲ್ಲಿ ಸಿಲುಕಿಕೊಂಡ ಅನ್ನದಾತ….!
ಹುಂಜವನ್ನು ಹೊತ್ತೊಯ್ಯುತ್ತಿದ್ದ ವ್ಯಕ್ತಿಯನ್ನ ಮೊಹಮ್ಮದ್ ಅಲಿ ಎನ್ನಲಾಗಿದೆ. ಕಂಡಕ್ಟರ್ ಜಿ. ತಿರುಪತಿಯವರು, ಸರ್ಕಾರಿ ಬಸ್‌ಗಳಲ್ಲಿ ಪಕ್ಷಿಗಳು ಅಥವಾ ಪ್ರಾಣಿಗಳು ಪ್ರಯಾಣಿಸಲು ಶುಲ್ಕ ನೀಡಬೇಕು ಎಂದು ಹೇಳಿ, 30ರೂ. ಪಾವತಿಸುವಂತೆ ಕೇಳಿದ್ದಾರೆ. ಆದರೆ ಅಲಿ ಇದಕ್ಕೆ ವಿರೋಧಿಸಿದ್ದಾನೆ. ಕಡೆಗೆ ಕಂಡಕ್ಟರ್ ಒತ್ತಾಯಕ್ಕೆ ಮಣಿದ ಆತ ಹುಂಜಕ್ಕು ಟಿಕೆಟ್ ಪಡೆದಿದ್ದಾನೆ. ಇವರಿಬ್ಬರ ನಡುವೆ ನಡೆದ ವಾಗ್ವಾದವನ್ನು ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ, ಪ್ರಯಾಣಿಕರೊಬ್ಬರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈಗ ವಿಡಿಯೋ ವೈರಲ್ ಆಗಿದ್ದು, ಇಡೀ ಘಟನೆ TSRTC ಅಧಿಕಾರಿಗಳ ಗಮನಕ್ಕೆ ಬಂದಿದೆ.
ಘಟನೆಯ ಬಗ್ಗೆ ಟಿಎಸ್‌ಆರ್‌ಟಿಸಿಯ ಗೋದಾವರಿಖನಿ ಡಿಪೋ ಮ್ಯಾನೇಜರ್ ವಿ.ವೆಂಕಟೇಶಂ ಮಾತನಾಡಿ, ಇಲಾಖೆ ನಿಯಮಗಳ ಪ್ರಕಾರ ಬಸ್‌ಗಳಲ್ಲಿ ಪ್ರಾಣಿಗಳನ್ನು ಕೊಂಡೊಯ್ಯಲು ಅವಕಾಶವಿಲ್ಲ. ಆದ್ದರಿಂದ ಕಂಡಕ್ಟರ್ ಪ್ರಯಾಣಿಕರನ್ನು ಹುಂಜದೊಂದಿಗೆ ಕೆಳಗಿಳಿಸಬೇಕಾಗಿತ್ತು. ಪ್ರಯಾಣಿಕರು ಹುಂಜವನ್ನು ಬಟ್ಟೆ ಸುತ್ತಿ ಬಚ್ಚಿಟ್ಟಿದ್ದರಿಂದ ಕಂಡಕ್ಟರ್ ಗಮನಿಸದೇ ಇರಬಹುದು. ಆದರೂ ಕಂಡಕ್ಟರ್ ನಿರ್ಲಕ್ಷಕ್ಕಾಗಿ ಮತ್ತು ಹುಂಜ ಸಾಗಿಸಲು ಪ್ರಯಾಣಿಕರಿಗೆ ಶುಲ್ಕ ವಿಧಿಸುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ, ಅವರನ್ನ ವಿಚಾರಣೆಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.