ದಿ ಗ್ರೇಟ್ ಖಲಿ ಎಂಬ ರಿಂಗ್ ನೇಮ್ ಮೂಲಕ ವಿಶ್ವದೆಲ್ಲೆಡೆ ಪ್ರಸಿದ್ಧಿ ಪಡೆದುಕೊಂಡಿರೋ, ವೃತ್ತಿಪರ ಕುಸ್ತಿಪಟು ಮತ್ತು ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ (WWE) ಸ್ಟಾರ್ ದಲಿಪ್ ಸಿಂಗ್ ರಾಣಾ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಪಂಜಾಬ್ ಚುನಾವಣೆಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗುತ್ತಿದೆ. ಇಂದು ಮುಂಜಾನೆ, ಖಲಿ ಅವರು ದೆಹಲಿಯ ಬಿಜೆಪಿ ಪ್ರಧಾನ ಕಚೇರಿಗೆ ತಲುಪಿದ್ದರು. ಮಧ್ಯಾಹ್ನ 1 ಗಂಟೆಗೆ ದೆಹಲಿಯ ಪಕ್ಷ ಸೇರ್ಪಡೆ ಸಮಾರಂಭದಲ್ಲಿ, ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ದಿ ಗ್ರೇಟ್ ಖಲಿಯನ್ನು ಬಿಜೆಪಿಗೆ ಸ್ವಾಗತಿಸಿದ್ದಾರೆ.
ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖಲಿ, ನಾನು ಬಿಜೆಪಿಯ ಸಿದ್ಧಾಂತದಿಂದ ಪ್ರೇರಿತನಾಗಿ ಪಕ್ಷಕ್ಕೆ ಸೇರಿದ್ದೇನೆ. ದೇಶಕ್ಕಾಗಿ ಅವರು ಮಾಡುತ್ತಿರುವ ಕೆಲಸ ನನಗೆ ಮೆಚ್ಚುಗೆಯಾಗಿದೆ. ಬಿಜೆಪಿ ಪಕ್ಷದ ಸಿದ್ಧಾಂತವು ಭಾರತದ ಪ್ರಗತಿಯನ್ನು ಗುರಿಯಾಗಿರಿಸಿಕೊಂಡಿದೆ ಎಂದಿದ್ದಾರೆ.
49 ವರ್ಷದ ಗ್ರೇಟ್ ಖಲಿ, ಮಾಜಿ ವಿಶ್ವ ಹೆವಿವೇಟ್ ಚಾಂಪಿಯನ್ ಆಗಿದ್ದು, ಅವರು ಯುನೈಟೆಡ್ ಸ್ಟೇಟ್ಸ್‌ನಲ್ಲಿ 2021 ರಲ್ಲಿ, ಪ್ರತಿಷ್ಠಿತ WWE ಹಾಲ್ ಆಫ್ ಫೇಮ್ ಗೆ ಸೇರ್ಪಡೆಗೊಂಡಿದ್ದಾರೆ. ಏಳು ಅಡಿ ಎತ್ತರವಿರುವ ಅವರು 2006 ರಲ್ಲಿ WWE ಯೂನಿವರ್ಸ್‌ಗೆ ಪ್ರವೇಶಿಸಿದರು.
ವೃತ್ತಿಪರ ಕುಸ್ತಿಪಟುವಾಗಿ WWEನಲ್ಲಿ ಖಲಿ ಅವರು ಕೆಲವು ಶ್ರೇಷ್ಠ ಕುಸ್ತಿ ತಾರೆಗಳೊಂದಿಗೆ ಸೆಣೆಸಿ ಸೈ ಎನಿಸಿಕೊಂಡಿದ್ದಾರೆ. WWEಗೆ ಸೇರ್ಪಡೆಯಾದ ಒಂದೇ ವರ್ಷದಲ್ಲಿ ಅಂದರೆ, 2007 ರಲ್ಲಿ ವಿಶ್ವ ಹೆವಿವೇಟ್ ಚಾಂಪಿಯನ್‌ಶಿಪ್ ಅನ್ನು ಗೆದ್ದಿದ್ದಾರೆ. ಖಲಿ ಅವರು ಮ್ಯಾಕ್‌ಗ್ರೂಬರ್, ಗೆಟ್ ಸ್ಮಾರ್ಟ್, ಮತ್ತು ಆಡಮ್ ಸ್ಯಾಂಡ್ಲರ್-ನಟಿಸಿದ ದಿ ಲಾಂಗೆಸ್ಟ್ ಯಾರ್ಡ್ ಸೇರಿದಂತೆ, ಹಲವಾರು ಹಾಲಿವುಡ್ ಚಲನಚಿತ್ರಗಳಲ್ಲಿ ಅತಿಥಿ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅಲ್ಲದೇ ಬಿಗ್ ಬಾಸ್ ರಿಯಾಲಿಟಿ ಶೋನಲ್ಲೂ ಕಾಣಿಸಿಕೊಂಡಿದ್ದಾರೆ.