ಪ್ರತಿದಿನ ಲಕ್ಷಾಂತರ ಜನರು ವಿವಿಧ ಉದ್ಯೋಗಗಳಿಗಾಗಿ ಸಂದರ್ಶನಗಳಿಗೆ ಹೋಗುತ್ತಾರೆ. ಕೆಲವರಿಗೆ ಆರಂಭಿಕ ಹಂತದಲ್ಲಿ ಕೆಲಸ ಸಿಕ್ಕರೆ. ಹೆಚ್ಚಿನವರಿಗೆ ಸಮಯ ಹಿಡಿಯುತ್ತದೆ. ಆದರೆ ಅಂದುಕೊಂಡಿದ್ದನ್ನು ಸಾಧಿಸಬೇಕೆಂದರೆ ಮರಳಿ ಯತ್ನ ಮಾಡುತ್ತಿರಬೇಕು. ಆದರೆ ಪ್ರಯತ್ನಕ್ಕೂ ಮಿತಿ ಇರುತ್ತದೆ ಎನ್ನುವ ಈ ಕಾಲದಲ್ಲಿ 24 ವರ್ಷದ ಹುಡುಗಿಯೊಬ್ಬಳು, ತನ್ನ ಕನಸಿನ ಉದ್ಯೋಗ ಗಿಟ್ಟಿಸಿಕೊಳ್ಳಲು 50 ಬಾರಿ ಸಂದರ್ಶನಗಳಿಗೆ ಹೋಗಿದ್ದಾಳೆ ಅಂದರೆ ನಂಬಲೇಬೇಕು.
ಹೌದು, ಬಿಹಾರ ರಾಜಧಾನಿ ಪಾಟ್ನಾದ ನಿವಾಸಿ ಸಂಪ್ರೀತಿ ಯಾದವ್ ಅವರು ಫೆಬ್ರವರಿ 14, 2022 ರಂದು ಟೆಕ್ ದೈತ್ಯ ಗೂಗಲ್ಗೆ ಸೇರಲು ಸಿದ್ಧರಾಗಿದ್ದಾರೆ. ಈ ಉದ್ಯೋಗದಲ್ಲಿ ಇವರಿಗೆ ಸಿಗುತ್ತಿರುವ ಪ್ಯಾಕೇಜ್ ಒಂದು ಕೋಟಿಗೂ ಅಧಿಕ.
24 ವರ್ಷದ ಸಂಪ್ರೀತಿ ಯಾದವ್ ಬಿಹಾರದ ರಾಜಧಾನಿ ಪಾಟ್ನಾದ ನೆಹರು ನಗರದವರು. ಸಂಪ್ರೀತಿ ಅವರ ತಂದೆ ರಾಮಶಂಕರ್ ಯಾದವ್ ಬ್ಯಾಂಕ್ ಅಧಿಕಾರಿಯಾಗಿದ್ದು, ಅವರ ತಾಯಿ ಶಶಿಪ್ರಭಾ ಯೋಜನೆ ಮತ್ತು ಅಭಿವೃದ್ಧಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿದ್ದಾರೆ.
ಸಂಪ್ರೀತಿ, 2014 ರಲ್ಲಿ ನೊಟ್ರೆ ಡೇಮ್ ಅಕಾಡೆಮಿಯಿಂದ 10 CGPA ಯೊಂದಿಗೆ ಮೆಟ್ರಿಕ್ಯುಲೇಶನ್ ಅನ್ನು ಪೂರ್ಣಗೊಳಿಸಿದರು. 2016 ರಲ್ಲಿ JEE ಮೇನ್ಸ್ ಅನ್ನು ಕ್ಲಿಯರ್ ಮಾಡಿದರು. ಮೇ 2021 ರಲ್ಲಿ ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ನಲ್ಲಿ ಬಿ.ಟೆಕ್ ಅನ್ನು ಪೂರ್ಣಗೊಳಿಸಿದರು. ಬಿಟೆಕ್ ಮುಗಿದ ತಕ್ಷಣ ನಾಲ್ಕು ಕಂಪನಿಗಳು ಆಫರ್ ಕೊಟ್ಟವು. ಅದು ಫ್ಲಿಪ್ಕಾರ್ಟ್ ಮತ್ತು ಅಡೋಬ್ನಂತಹ ಕಂಪನಿಗಳನ್ನು ಒಳಗೊಂಡಿದೆ. ಆದಾಗ್ಯೂ, ಸಂಪ್ರೀತಿ ಮೈಕ್ರೋಸಾಫ್ಟ್ ಅನ್ನು ಆಯ್ಕೆ ಮಾಡಿಕೊಂಡರು, ಅದು 44 ಲಕ್ಷ ರೂ. ಪ್ಯಾಕೇಜ್ ನೀಡುತ್ತಿತ್ತು ಎಂಬುದು ಗಮನಾರ್ಹ.
ಸಂಪ್ರೀತಿ ಯಾದವ್ ಅವರಿಗೆ ಗೂಗಲ್ ನಲ್ಲಿ ಕೆಲಸ ಮಾಡುವ ಕನಸು. ಮೈಕ್ರೋಸಾಫ್ಟ್ನಲ್ಲಿ ಕೆಲಸ ಮಾಡುವಾಗಲೂ ತಮ್ಮ ಕನಸನ್ನು ಮುಂದುವರಿಸಿದರು. ಈ ಕ್ರಮದಲ್ಲಿ ಬರೋಬ್ಬರಿ 50 ಸಂದರ್ಶನಗಳಿಗೆ ಹಾಜರಾಗಿದ್ದಾರೆ. ಅಂತಿಮವಾಗಿ 9 ಸುತ್ತಿನ ಸಂದರ್ಶನಗಳನ್ನು ಕ್ಲಿಯರ್ ಮಾಡಿದ ನಂತರ ಗೂಗಲ್ ಸಂಪ್ರೀತಿಯನ್ನು ಆಯ್ಕೆ ಮಾಡಿ ರೂ. 1.10 ಕೋಟಿ ವಾರ್ಷಿಕ ಪ್ಯಾಕೇಜ್ ನೀಡಿದೆ. ಅವರು ಫೆಬ್ರವರಿ 14, 2022 ರಂದು ಗೂಗಲ್ ಸೇರಲಿದ್ದಾರೆ. ಇದಕ್ಕಾಗಿ ಸಂಪ್ರೀತಿ ಲಂಡನ್ ಗೆ ಹೋಗಬೇಕು. ಅವರು ಪ್ರಸ್ತುತ ಆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ.
ಪ್ಯಾಕೇಜ್ ಅನ್ನು ಹೊರತುಪಡಿಸಿ, ಗೂಗಲ್ ಲಂಡನ್ನಲ್ಲಿ ಕೆಲಸ ಪಡೆಯುವುದು ಬಹಳ ಮುಖ್ಯವಾದ ಅಂಶ. ‘ಪ್ರತಿಯೊಬ್ಬ ಸಾಫ್ಟ್ವೇರ್ ಎಂಜಿನಿಯರ್ಗೂ ಇದೊಂದು ಕನಸಿನ ಕೆಲಸ. ಇಷ್ಟು ಬೇಗ ಬಂದಿರುವುದೇ ಒಂದು ದೊಡ್ಡ ಭಾವ. ಆದರೆ ನಮ್ಮ ಸಂಬಂಧಿಕರು ಮತ್ತು ಸ್ನೇಹಿತರು ಈ ಬಗ್ಗೆ ಹೇಳುವವರೆಗೂ ನನಗೆ ಕೆಲಸ ಸಿಕ್ಕಿತು ಎಂದು ನನಗೆ ತಿಳಿದಿರಲಿಲ್ಲ. ಅದು ಸುಲಭದ ಗೆಲುವಾಗಿರಲಿಲ್ಲ. ನಾನು ತುಂಬಾ ಕಷ್ಟಪಟ್ಟೆ. ಸಂದರ್ಶನಗಳಲ್ಲಾಗುವ ಒತ್ತಡವನ್ನು ನಿವಾರಿಸುವುದು ಮುಖ್ಯ. ನನ್ನ ಪೋಷಕರಿಂದ ನನಗೆ ಸಾಕಷ್ಟು ಸ್ಫೂರ್ತಿ ಸಿಕ್ಕಿದೆ.
ನಾವು ಭೇಟಿಯಾಗುವ ಪ್ರತಿಯೊಬ್ಬರಿಂದ ನಾವು ಏನನ್ನಾದರೂ ಕಲಿಯುತ್ತೇವೆ ಎಂದು ನಾನು ಭಾವಿಸುತ್ತೇನೆ. ಎಲ್ಲರಂತೆ ನಾನು ಕೂಡ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನೊಂದಿಗೆ ಸಾಮಾಜಿಕ ಮಾಧ್ಯಮವನ್ನು ಪ್ರಾರಂಭಿಸಿದೆ. ನಾನು ಈಗ ಲಿಂಕ್ಡ್ಇನ್ನಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತೇನೆ. ಸಾಮಾಜಿಕ ಮಾಧ್ಯಮವು ಸಂಪರ್ಕಿಸಲು ಉತ್ತಮ ಮಾರ್ಗವಾಗಿದೆ. ಆದರೆ ಸ್ಪಷ್ಟ ಗುರಿಯನ್ನು ಹೊಂದುವುದು ಮತ್ತು ಹಂತ ಹಂತವಾಗಿ ಮುನ್ನಡೆಯುವುದು ಮುಖ್ಯ ಎಂದು ಸಂಪ್ರೀತಿ ಯಾದವ್ ಹೇಳಿದರು.