ಅಂಬಾಲಾ: ಉತ್ತರ ಭಾರತದ ಮದುವೆ ಸಂಪ್ರದಾಯದಲ್ಲಿ ವರ ಕುದುರೆಯೇರಿ ವಿವಾಹ ಸ್ಥಳಕ್ಕೆ ಆಗಮಿಸಿದ್ರೆ, ವಧು ಪಲ್ಲಕ್ಕಿಯಲ್ಲಿ ಬರೋದು ವಾಡಿಕೆ. ಆದರೀಗ ವಧುವೊಬ್ಬಳು ಪುರುಷ ಪ್ರಧಾನ ವ್ಯವಸ್ಥೆಗೆ ಸವಾಲೆಸೆದಿದ್ದಾಳೆ.
ಹೌದು, ಹರಿಯಾಣದಲ್ಲಿ ವಧು ಪ್ರಿಯಾ ಎಂಬಾಕೆ ಮದುವೆಯ ಮೆರವಣಿಗೆಯಲ್ಲಿ ಕುದುರೆಯೇರಿ ಕತ್ತಿಯೊಂದಿಗೆ ವರನ ಮನೆಗೆ ತೆರಳಿದ್ದಾಳೆ. ಕಾನೂನು ಪದವೀಧರೆಯಾಗಿರುವ ಈಕೆಯ ಜೊತೆ ತನ್ನ ತಂದೆ, ತಾಯಿ ಹಾಗೂ ಇತರ ಸಂಬಂಧಿಕರು ಇದ್ದರು.
ವರದಿ ಪ್ರಕಾರ, ಪ್ರಿಯಾ ತಂದೆ ನರೀಂದರ್ ಅಗರ್ವಾಲ್ ಅವರು ಗಂಡು-ಹೆಣ್ಣೆಂಬ ಭೇದವನ್ನು ತೊಡೆದು ಹಾಕಲು ಬಯಸಿದ್ದರಂತೆ. ಈ ಬಗ್ಗೆ ಮಾತನಾಡಿದ ವಧು ಪ್ರಿಯಾ, ತನ್ನ ಬಾಲ್ಯದ ಆಸೆ ಈಡೇರಿದ್ದಕ್ಕೆ ಖುಷಿಯಿದೆ ಎಂದಿದ್ದಾಳೆ. ತಮ್ಮ ಮನೆಯಲ್ಲಿ ತಂದೆ-ತಾಯಿ ಗಂಡು ಮಗುವಿನಂತೆ ತನ್ನನ್ನು ಬೆಳೆಸಿದ್ದಾರೆ ಎಂದು ತಿಳಿಸಿದ್ದಾಳೆ.
ಪ್ರಿಯಾ ಮಾತ್ರವಲ್ಲ, ಇತ್ತೀಚೆಗೆ ಅನೇಕ ವಧುಗಳು ಈಗ ಹಳೆಯ ಪದ್ಧತಿಗೆ ತಿಲಾಂಜಲಿ ಇಡಲು ಮುಂದಾಗುತ್ತಿದ್ದಾರೆ. ಡಿಸೆಂಬರ್ 2021 ರಲ್ಲಿ ನಡೆದ ಇದೇ ರೀತಿಯ ಘಟನೆಯಲ್ಲಿ ಇಂಡಿಗೋ ಏರ್‌ಲೈನ್ಸ್‌ನ ಹಿರಿಯ ಗಗನಸಖಿ ಅನುಷ್ಖಾ ಗುಹಾ ಅವರು ತಮ್ಮ ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಕುದುರೆಯೇರಿ ವರನ ಮನೆಗೆ ತೆರಳಿದ್ದರು.