ಹಿಜಾಬ್ ವಿವಾವದದ ಬಗ್ಗೆ ಪ್ರಿಯಾಂಕ ಗಾಂಧಿ ಮಾಡಿದ್ದ ಟ್ವೀಟ್ ಗೆ ಪ್ರತಿಕ್ರಿಯಿಸುತ್ತಾ ಮಹಿಳೆಯರ ಉಡುಪಿನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ರೇಣುಕಾಚಾರ್ಯ ಕ್ಷಮೆ ಯಾಚಿಸಿದ್ದಾರೆ.
ವಸ್ತ್ರದ ವಿಚಾರದಲ್ಲಿ ಮಹಿಳೆಯರಿಗೆ ಸಂಪೂರ್ಣ ಹಕ್ಕಿದೆ. ಬಿಕಿನಿಯಿರಬಹುದು, ಜೀನ್ಸ್ ಇರಬಹುದು ಯಾವುದೇ ಬಟ್ಟೆ ತೊಡುವುದನ್ನು ನಿರ್ಧರಿಸುವ ಹಕ್ಕು ಮಹಿಳೆಯರಿಗಿದೆ ಎಂದು ಪ್ರಿಯಾಂಕ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದರು.
ಈ ಬಗ್ಗೆ ಉತ್ತರ ನೀಡುವ ಭರದಲ್ಲಿ, ಮಹಿಳೆಯರು ಪ್ರಿಯಾಂಕ ಹೇಳಿದಂತ ಬಟ್ಟೆ ಹಾಕಿಕೊಂಡರೆ ಪುರುಷರು ಉದ್ವೇಗಕ್ಕೆ ಒಳಗಾಗುತ್ತಾರೆ. ಅಂತಾ ಬಟ್ಟೆ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತದೆ ಎಂದು ರೇಣುಕಾಚಾರ್ಯ ಹೇಳಿಕೆ ನೀಡಿದ್ದರು. ಅವರ ವಿವಾದಿತ ಹೇಳಿಕೆಯ ವಿರುದ್ಧ ಸಂಸದೆ ಸುಮಲತಾ, ಕಾಂಗ್ರೆಸ್ ನಾಯಕಿ ಜಯಮಾಲ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದರು.
ಇದರಿಂದ ಎಚ್ಚೆತ್ತುಕೊಂಡ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ತಕ್ಷಣ ಕ್ಷಮೆ ಯಾಚಿಸಿದ್ದಾರೆ. ಪ್ರಿಯಾಂಕ ಗಾಂಧಿ ಅವರು ತಮ್ಮ ಹೇಳಿಕೆಗೆ ಕ್ಷಮೆ ಕೇಳಲಿ ಎಂದು ಹೇಳುವುದಷ್ಟೇ ನನ್ನ ಉದ್ದೇಶವಾಗಿತ್ತು. ಮಹಿಳೆಯರ ಬಗ್ಗೆ ಮಾತನಾಡುವುದು ನನ್ನ ಉದ್ದೇಶವಾಗಿರಲಿಲ್ಲ. ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆ ಇರಲಿ ಎಂದಿದ್ದಾರೆ.