ಹಿಜಾಬ್ ವಿವಾದದ ಬಗ್ಗೆ ಮತ್ತೊಂದು ಸ್ಪೋಟಕ ಹೇಳಿಕೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಹಿಂದೂ ವಿದ್ಯಾರ್ಥಿಗಳಿಗೆ ಕೇಸರಿ ಶಾಲುಗಳನ್ನ ಸರಬರಾಜು ಮಾಡಿದ್ದು ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿರುವ ಒಬ್ಬರ ಮಗ ಎಂದಿದ್ದಾರೆ. ಯಾವುದೇ ಹೆಸರನ್ನು ಬಹಿರಂಗ ಪಡಿಸದೆ ಬಿಜೆಪಿ ನಾಯಕರ ವಿರುದ್ಧ ಡಿಕೆಶಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಕೇಸರಿ ಶಾಲುಗಳನ್ನ, ಪೇಟಗಳನ್ನ ತರಿಸಿ ಕೊಟ್ಟವರು ಯಾರು. ರಾತ್ರೋರಾತ್ರಿ ಶಾಲುಗಳು, ಪೇಟಗಳು ಎಲ್ಲಿಂದ ಬಂದವು. ವಿದ್ಯಾರ್ಥಿಗಳಿಗೆ ಕೇಸರಿ ಶಾಲುಗಳನ್ನ ಸರಬರಾಜು ಮಾಡಿದವರ ಬಗ್ಗೆ ನಮಗೂ ತಿಳಿದಿದೆ. ಗುಜರಾತ್ ನ ಸೂರತ್ ನಲ್ಲಿ 50ಲಕ್ಷ ರೂಪಾಯಿಗೆ ಶಾಲುಗಳನ್ನ ಆರ್ಡರ್ ಮಾಡಲಾಗಿದೆ. ನಮಗೆಲ್ಲಾ ಗೊತ್ತಾಗಲ್ಲ ಅಂದುಕೊಂಡಿದ್ದಾರೆ. ನಮಗೂ ಕೂಡ ಮಾಹಿತಿ ನೀಡುವವರು ಇದ್ದಾರೆ. ಇದರೆಲ್ಲರ ಹಿಂದೆ ಯಾರಿದ್ದಾರೆಂದು ನಮಗೂ ತಿಳಿದಿದೆ ಎಂದು ಆರೋಪಿಸಿರುವ ಅವರು, ವಿದ್ಯಾರ್ಥಿಗಳ ನಡುವೆ ವಿಷಬೀಜ ಬಿತ್ತುವುದು ಬೇಡ ಎಂದು ಮನವಿ ಮಾಡಿದ್ದಾರೆ.
ನೆನ್ನೆ ನಡೆದ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಡಿಕೆಶಿ, ಕರ್ನಾಟಕ ಸರ್ಕಾರ ಈ ವಿಚಾರವನ್ನು ಬಗೆಹರಿಸುವಲ್ಲಿ ಎಡವಿದೆ. ಹಿಜಾಬ್ ವಿವಾದಿಂದ ದೇಶಕ್ಕೆ ಅವಮಾನವಾಗಿದೆ ಎಂದಿದ್ದರು. ಇನ್ನು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸಹ ಸರಣಿ ಟ್ವೀಟ್ ಮಾಡಿ ಬಿಜೆಪಿ ನಾಯಕರು ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.