ಕೆಲಸ ಸ್ಥಳಗಳು ಹಾಗೂ ಆನ್ಲೈನ್ ಸಂವಹನಕ್ಕೆ ಹೊಸ ಆಯಾಮ ಕೊಡಲು ಬಂದಿರುವ ಮೆಟಾವರ್ಸ್‌ನಲ್ಲಿ ತಮಿಳುನಾಡಿನ ಜೋಡಿಯೊಂದು ಹಸೆಮಣೆಗೆ ಕಾಲಿಟ್ಟದೆ.
ಭಾನುವಾರ ಹಮ್ಮಿಕೊಂಡಿದ್ದ ಈ ಜೋಡಿಯ ಮದುವೆಯು ವರ್ಚುವಲ್ ಜಗತ್ತಿನಲ್ಲಿ, ಹ್ಯಾರಿ ಪಾಟರ್‌ನ ಹಾಗ್‌ವಾರ್ಟ್ಸ್ ಕ್ಯಾಸಲ್‌ನಲ್ಲಿ ಆಯೋಜಿಸಲಾಗಿತ್ತು. ದಿನೇಶ್ ಎಸ್‌ಪಿ ಹಾಗೂ ಜಗನಂದಿನಿ ರಾಮಸ್ವಾಮಿ ಹೀಗೆ ಹಸೆಮಣೆ ಏರಿದ ದಂಪತಿಗಳಾಗಿದ್ದಾರೆ.
ಮದುಮಗಳ ದಿವಂಗತ ತಂದೆಯೇ ಯಜಮಾನಿಕೆ ವಹಿಸಿಕೊಂಡು ಮದುವೆ ಮಾಡಿದಂತೆ ವರ್ಚುವಲ್ ಆಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನವದಂಪತಿಗಳು ವರ್ಚುವಲ್ ಆಗಿಯೇ ಅತಿಥಿಗಳನ್ನು ಭೇಟಿಯಾಗಿದ್ದಾರೆ. ಐಐಟಿ-ಮದ್ರಾಸ್‌ನಲ್ಲಿ ಪ್ರಾಜೆಕ್ಟ್ ಅಸೋಸಿಯೇಟ್ ಆಗಿ ಕೆಲಸ ಮಾಡುವ ದಿನೇಶ್ ಹೀಗೆ ಮೆಟಾವರ್ಸ್‌ನಲ್ಲಿ ತಮ್ಮ ಮದುವೆ ಪ್ಲಾನ್ ಮಾಡಿಕೊಂಡಿದ್ದರು. ಸಾಫ್ಟ್‌ವೇರ್ ಡೆವಲಪರ್ ಆಗಿರುವ ತಮ್ಮ ಮನದನ್ನೆಯನ್ನು ಕೈಹಿಡಿಯುವ ಸಮಾರಂಭವನ್ನು ಶಾಸ್ತ್ರೋಕ್ತವಾಗಿ ತಮಿಳುನಾಡಿನ ಶಿವಲಿಂಗಪುರಂ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗುವುದು.
“ನಾನು ಕಳೆದ ಕೆಲ ವರ್ಷಗಳಿಂದಲೂ ಬ್ಲಾಕ್‌ಚೇನ್, ಎನ್‌ಎಫ್‌ಟಿಗಳು ಹಾಗೂ ಇತರೆ ತಂತ್ರಜ್ಞಾನದ ಜೊತೆಗೆ ಕೆಲಸ ಮಾಡುತ್ತಿದ್ದೇನೆ. ಯಾವಾಗಲೂ ವಿಶಿಷ್ಟವಾಗಿದ್ದ ನಾನು ನನ್ನ ಜೀವನವನ್ನು ಸಾಧ್ಯವಾದಷ್ಟು ಸ್ಮರಣೀಯವಾಗಿ ಕಳೆಯಲು ಇಚ್ಛಿಸುತ್ತೇನೆ. ಒಬ್ಬ ಟೆಕ್ಕಿಯಾಗಿ, ಸಮಸ್ಯೆಗಳಲ್ಲಿಯೇ ಪರಿಹಾರ ಕಂಡುಕೊಳ್ಳುವುದು ನನ್ನ ಖಯಾಲಿ. ಅಂತರ್ಜಾಲವೆಂದರೇನು ಹಾಗೂ ಮೆಟಾವರ್ಸ್ ಎಂದರೇನು ಅರಿಯದ ನಮ್ಮ ಹೆತ್ತವರಿಗೆ ಹಾಗೂ ಸಂಬಂಧಿಕರಿಗೆ ಈ ವಿಚಾರ ವಿವರಿಸುವುದು ನಮಗೆ ಕಷ್ಟವಾಗಿದ್ದು ನಿಜ. ಕೆಲ ಹೊತ್ತಿನ ವಿವರಣೆ ಬಳಿಕ ನಾವು ವಿಡಿಯೋ ಗೇಮ್ ಹಾಗೂ ಕಾರ್ಟೂನ್‌ಗಳ ಉದಾಹರಣೆಯೊಂದಿಗೆ ತಿಳಿಸಿದ ಹೇಳಿದಾಗ ಅವರಿಗೆ ಅರ್ಥವಾಗಿದೆ,” ಎನ್ನುತ್ತಾರೆ ದಿನೇಶ್.
ಸೆನ್ಸಾರ್‌ಗಳು, ಲೆನ್ಸ್‌ಗಳು ಹಾಗೂ ಇತರೆ ಗ್ಯಾಜೆಟ್‌ಗಳ ಮೂಲಕ 3ಡಿ ವರ್ಚುವಲ್ ಜಗತ್ತಿನಲ್ಲಿ ಜನರು ಒಬ್ಬರನ್ನೊಬ್ಬರು ಭೇಟಿಯಾಗಲು ಅನುವು ಮಾಡಿಕೊಡುವ ಮೆಟಾವರ್ಸ್ ಅಮೆರಿಕದಲ್ಲಿ ಅದಾಗಲೇ ಸುದ್ದಿ ಮಾಡಿದ್ದು, ಅನೇಕ ಮದುವೆ ಸಮಾರಂಭಗಳಿಗೆ ವೇದಿಕೆಯಾಗಿದೆ.