ಕೈಗಾರಿಕೋದ್ಯಮಿ ರತನ್ ಟಾಟಾ ಶ್ವಾನಪ್ರಿಯರು ಎಂಬ ವಿಚಾರ ಬಹುತೇಕರಿಗೆ ಗೊತ್ತಿದೆ. ಟಾಟಾ ಸಮೂಹದ ಚೇರ್ಮನ್ ಬೀದಿ ನಾಯಿಗಳಿಗೆಂದೇ ವಿಶೇಷ ಕೆನಲ್ ಒಂದನ್ನು ಸಮೂಹದ ಪ್ರಧಾನ ಕಾರ್ಯಾಲಯದ ಬಳಿ ಕಟ್ಟಿಸಿದ್ದಾರೆ.
ಟಾಟಾ ಸಮೂಹದ ಪ್ರಧಾನ ಕಚೇರಿಯ ಬಳಿ ಇರುವ ನಾಯಿಗಳಲ್ಲಿ ಒಂದಾದ ’ಗೋವಾ’ ರತನ್ ಟಾಟಾರ ಕಚೇರಿ ಬಳಿಯಲ್ಲೇ ದಿನವಿಡೀ ಇರುತ್ತದೆ. ಹ್ಯೂಮನ್ಸ್ ಆಫ್ ಬಾಂಬೆಯ ಸಂಸ್ಥಾಪಕಿ ಕರಿಶ್ಮಾ ಮೆಹ್ತಾ ಗೋವಾ ಜೊತೆಗೆ ತಮಗಾದ ಅನುಭವವೊಂದನ್ನು ಹಂಚಿಕೊಂಡಿದ್ದಾರೆ.
ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರುತ್ತಿದೆ ಈ ʼವಿಟಮಿನ್ʼ ಕೊರತೆ
ನಾಯಿಗಳೆಂದರೆ ಭಯ ಪಡುವ ಮೆಹ್ತಾಗೆ ಒಮ್ಮೆ ರತನ್ ಟಾಟಾರ ಸಂದರ್ಶನ ಪಡೆಯುವ ಅವಕಾಶ ಬಂದಿತ್ತಂತೆ. ಅವರನ್ನು ಕಾಣಲು ಕಾಯುತ್ತಿದ್ದ ವೇಳೆ, ರತನ್ ಟಾಟಾ ಕುರ್ಚಿ ಬಳಿಯಲ್ಲೇ ಗೋವಾ ಕುಳಿತಿದ್ದಿದ್ದನ್ನು ಕಂಡ ಮೆಹ್ತಾ, ತಮಗೆ ನಾಯಿಗಳೆಂದರೆ ಭಯವೆಂದು ಅವರ ಸಹಾಯಕ ಶಂತನು ನಾಯ್ಡು ಬಳಿ ಹೇಳಿಕೊಂಡಿದ್ದರಂತೆ.
ಇಬ್ಬರ ಸಮಾಲೋಚನೆಯನ್ನು ಆಲಿಸಿದ ರತನ್ ಟಾಟಾ, “ಗೋವಾ, ನಿನ್ನನ್ನು ಕಂಡು ಆಕೆಗೆ ಭಯವಂತೆ, ದಯವಿಟ್ಟು ಜಾಣನಂತೆ ಕುಳಿತುಕೋ!” ಎಂದು ತಮ್ಮ ಪ್ರೀತಿಯ ಶ್ವಾನಕ್ಕೆ ತಿಳಿಸಿ, ಬಳಿಕ ಮೆಹ್ತಾಗೆ ’ಬನ್ನಿ’ ಎಂದಿದ್ದರಂತೆ.
ಮುಂದಿನ 30-40 ನಿಮಿಷಗಳ ಕಾಲ ಮೆಹ್ತಾ ಅವರು ಟಾಟಾರ ಸಂದರ್ಶನ ಪಡೆಯುತ್ತಿದ್ದಷ್ಟೂ ಸಮಯ ಆಕೆಯ ಬಳಿಗೆ ಗೋವಾ ಒಂದೇ ಒಂದು ಕ್ಷಣವೂ ಹೋಗಲಿಲ್ಲವಂತೆ.
ಕಳೆದ ಡಿಸೆಂಬರ್ನಲ್ಲಿ 84ನೇ ವಸಂತ ಪೂರೈಸಿದ ಟಾಟಾ, ತಮ್ಮ ಈ ಮುದ್ದಿನ ನಾಯಿಗೆ ಗೋವಾ ಎಂದು ಹೆಸರಿಟ್ಟ ವಿಚಾರದ ಹಿಂದಿನ ಕಥೆಯನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
“ಗೋವಾದಲ್ಲಿ ನನ್ನ ಸಹೋದ್ಯೋಗಿಯೊಬ್ಬರ ಕಾರಿಗೆ ಹತ್ತಿಕೊಂಡು ಬಾಂಬೆ ಹೌಸ್ಗೆ ಬಂದಿದ್ದ ಈ ಬೀದಿ ನಾಯಿ ಮರಿಗೆ ಗೋವಾ ಅಂತಲೇ ಹೆಸರಿಟ್ಟಿದ್ದೇವೆ,” ಎಂದಿದ್ದರು ರತನ್ ಟಾಟಾ.