ಉತ್ತರ ಪ್ರದೇಶದ ಬಿಜ್ನೋರ್ನಲ್ಲಿ ನಡೆದ ವರ್ಚುವಲ್ ಜನ್ ಚೌಪಾಲ್ ಅನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, ಲಸಿಕೆಗಳ ವಿರುದ್ಧ ವದಂತಿಗಳನ್ನ ಹರಡಿದ್ದವರಿಗೆ ನಿಮ್ಮ ಮತಗಳ ಮೂಲಕ ಸರಿಯಾದ ಕಪಾಳಮೋಕ್ಷ ನೀಡಿ ಎಂದಿದ್ದಾರೆ.
ಲಸಿಕೆ ಬಂದ ಹೊಸತರಲ್ಲಿ ಹಲವು ಪಕ್ಷದ ನಾಯಕರೇ ಅದನ್ನ ಪಿಎಂ ನರೇಂದ್ರ ಮೋದಿ ಮತ್ತು ಬಿಜೆಪಿಯೊಂದಿಗೆ ಗುರುತಿಸಿದರು. ಅಂತಹವರಿಗೆ ಈಗ ನಿಮ್ಮ ಮತದ ಮೂಲಕ ಸೂಕ್ತ ಉತ್ತರ ನೀಡಿ ಎಂದು ಯೋಗಿ ಮತದಾರರನ್ನು ಕೇಳಿಕೊಂಡಿದ್ದಾರೆ.
ಇದೇ ವೇಳೆ ಹಿಂದಿನ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷದ ನೇತೃತ್ವದ ಸರ್ಕಾರಗಳು ಇಡೀ ರಾಜ್ಯವನ್ನು ಕತ್ತಲೆಯಲ್ಲಿ ಮುಳುಗಿಸಿದ್ದವು. ಆದರೆ ಬಿಜೆಪಿ ಆಡಳಿತವು ಕಳೆದ ಐದು ವರ್ಷಗಳಲ್ಲಿ ಪ್ರತಿ ಮನೆಗೆ ವಿದ್ಯುತ್ ಖಾತ್ರಿಪಡಿಸಿದೆ. ಉತ್ತರಪ್ರದೇಶದ 100 ರಷ್ಟು ಜನರು ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಳ್ಳುವುದರ ಜೊತೆಗೆ, ಲಸಿಕೆಗಳ ವಿರುದ್ಧ ವದಂತಿಗಳನ್ನು ಹರಡುವ, ಲಸಿಕೆಗಳನ್ನು `ಮೋದಿ` ಮತ್ತು `ಬಿಜೆಪಿ` ಲಸಿಕೆಗಳು ಎಂದು ಕರೆಯುವವರಿಗೆ ನಿಮ್ಮ ಮತಗಳ ಮೂಲಕ ಕಠಿಣ ಕಪಾಳಮೋಕ್ಷ ಮಾಡುವ ಸಮಯ ಇದು ಎಂದಿದ್ದಾರೆ.
ಇದೆ ವೇಳೆ ಮಾತನಾಡಿದ ಅವರು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮತ್ತು ಸಮಾಜವಾದಿ ಪಕ್ಷದ (ಎಸ್ಪಿ) ಸದಸ್ಯರು ಕತ್ತಲೆಯಲ್ಲಿ ಅಧಿಕಾರ ಆನಂದಿಸುವವರು. ಜನರನ್ನು ಲೂಟಿ ಮಾಡುವವರು. ಐದು ವರ್ಷಗಳ ಹಿಂದೆ ಯಾರಿಗಾದರೂ ಕರೆಂಟ್ ಸಿಕ್ಕಿದೆಯೇ? ಎಸ್ಪಿ ಅಥವಾ ಬಿಎಸ್ಪಿ ಸದಸ್ಯರು ಕತ್ತಲೆಯಲ್ಲಿ ವಾಸಿಸುತ್ತಿದ್ದರು. `ಚಾಂದಿನಿ ರಾತ್ ಚೋರೋ (ಕಳ್ಳರು) ಕೋ ಅಚ್ಚಿ ಲಗ್ತೀ ಹೈ ಎಂಬ ನುಡಿಗಟ್ಟಿನ ಮೂಲಕ ವಿರೋಧ ಪಕ್ಷಗಳನ್ನ ತರಾಟೆಗೆ ತೆಗೆದುಕೊಂಡರು.