ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ನಲ್ಲಿ ಇಗ್ಲೂ (ಗುಹೆ) ಕೆಫೆ ತೆರೆಯಲಾಗಿದ್ದು, ಹೊಸ ಪ್ರವಾಸಿ ಆಕರ್ಷಣೆಯಾಗಿದೆ. ಸ್ನೋಗ್ಲು ಹೆಸರಿನ ಕೆಫೆಯನ್ನು ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ನ ಪ್ರಸಿದ್ಧ ಸ್ಕೀ ರೆಸಾರ್ಟ್ನಲ್ಲಿ ಸ್ಥಾಪಿಸಲಾಗಿದೆ. ಇದು 37.5 ಅಡಿ ಎತ್ತರ ಮತ್ತು 44.5 ಅಡಿ ವಿಸ್ತೀರ್ಣವನ್ನು ಹೊಂದಿದೆ.
ಇಗ್ಲೂ (ಗುಹೆ) ಅನ್ನು ಸೈಯದ್ ವಾಸಿಂ ಶಾ ಅವರು ನಿರ್ಮಿಸಿದ್ದು, ಈ ರೀತಿಯ ಕೆಫೆ ವಿಶ್ವದಲ್ಲೇ ಅತಿದೊಡ್ಡದು ಎಂದು ಹೇಳಿಕೊಂಡಿದ್ದಾರೆ. ಗುಹೆ ರೀತಿಯ ಕೆಫೆಯು ಸ್ವಿಟ್ಜರ್ಲೆಂಡ್ನಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಗುಲ್ಮಾರ್ಗ್ ನಲ್ಲೂ ಬಹಳಷ್ಟು ಹಿಮ ಬೀಳುವುದರಿಂದ, ಇಂತಹ ಪರಿಕಲ್ಪನೆಯನ್ನು ಇಲ್ಲಿ ಯಾಕೆ ಶುರು ಮಾಡಬಾರದು ಎಂಬ ಆಲೋಚನೆ ಬಂದಿತು. ಹೀಗಾಗಿ ಈ ಕೆಫೆಯನ್ನು ನಿರ್ಮಿಸಲಾಯಿತು ಎಂದು ಹೇಳಿದ್ದಾರೆ.
ಅವರು ಕಳೆದ ವರ್ಷವೂ ಇಗ್ಲೂ ಕೆಫೆಯನ್ನು ರಚಿಸಿದ್ದ ಶಾ, ಇದು ಏಷ್ಯಾದ ಅತಿದೊಡ್ಡ ಕೆಫೆ ಎಂದು ಹೇಳಿಕೊಂಡಿದ್ದರು. ಕಳೆದ ವರ್ಷದ ಕೆಫೆಯಲ್ಲಿ ನಾಲ್ಕು ಟೇಬಲ್ಗಳಿದ್ದವು ಮತ್ತು ಒಂದೇ ಬಾರಿಗೆ 16 ಜನರು ಇಗ್ಲೂ ಕೆಫೆಯೊಳಗೆ ಆಹಾರ ಸೇವಿಸಬಹುದಿತ್ತು. ಆದರೆ, ಈ ವರ್ಷ ಅವರು 10 ಟೇಬಲ್ಗಳನ್ನು ಇರಿಸಿದ್ದು, 40 ಮಂದಿ ಆಹಾರ ಸೇವಿಸಬಹುದು.
ಇನ್ನು ಈ ಕೆಫೆಯ ನಿರ್ಮಾಣಕ್ಕಾಗಿ 25 ಜನರು ಹಗಲಿರುಳು ಕೆಲಸ ಮಾಡಿದ್ದು, ಇದನ್ನು ಪೂರ್ಣಗೊಳಿಸಲು 64 ದಿನಗಳನ್ನು ತೆಗೆದುಕೊಂಡಿದೆ. ಕೆಫೆಯು ಸ್ಥಳೀಯ ಜನರಿಗೆ ಮತ್ತು ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರವಾಗಿದೆ. ಶುಕ್ರವಾರದಂದು ಉದ್ಘಾಟನೆಯಾದ ಕೆಫೆಗೆ ಡಜನ್ಗಟ್ಟಲೆ ಜನರು ಟೇಬಲ್ಗಳನ್ನು ಬುಕ್ ಮಾಡಿದ್ದಾರೆ ಮತ್ತು ಕೆಫೆ ಫೆಬ್ರವರಿ ಅಂತ್ಯದವರೆಗೆ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ.
ಅಂದಹಾಗೆ, ಇಗ್ಲೂ ಕೆಫೆಯಲ್ಲಿ ಸಾಂಪ್ರದಾಯಿಕ ಸ್ಪರ್ಶವನ್ನು ನೀಡಲು ಕೈಯಿಂದ ಕೆತ್ತಿದ ತಾಮ್ರದ ಸಮೋವರ್ನೊಂದಿಗೆ ಕಾಶ್ಮೀರಿ ಕಲಾಕೃತಿಗಳನ್ನು ಇರಿಸಲಾಗಿದೆ. ಇದು ವಿಶ್ವದ ಅತಿ ದೊಡ್ಡ ಇಗ್ಲೂ ಕೆಫೆ ಎಂದು ಆಡಳಿತ ಮಂಡಳಿ ಹೇಳಿಕೊಂಡಿದ್ದು, ಗಿನ್ನಿಸ್ ದಾಖಲೆಗೆ ಅರ್ಜಿ ಸಲ್ಲಿಸಿದೆ.
![](https://kannadadunia.com/wp-content/uploads/2022/02/pjimage-97-2.jpg)