ಧರ್ಮ ಸಂಸದ್ ಹೆಸರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಲವರು ನೀಡಿರುವ ಹೇಳಿಕೆಗಳು ಹಿಂದುತ್ವವನ್ನು ಪ್ರತಿನಿಧಿಸುವುದಿಲ್ಲ ಎಂದು ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಧರ್ಮ ಸಂಸದ್ ನಲ್ಲಿ ಹಿಂದೂ ಧಾರ್ಮಿಕ ಮುಖಂಡ ಕಾಳಿಚರಣ್ ಮಹಾರಾಜ್ ಅವರು ಮಹಾತ್ಮ ಗಾಂಧಿ ಬಗ್ಗೆ ಅವಮಾನಕಾರಿಯಾಗಿ ಮಾತನಾಡಿ ನಾಥುರಾಮ್ ಗೋಡ್ಸೆ ಅವರನ್ನು ಸ್ತುತಿಸುತ್ತಿದ್ದ ಪ್ರಕರಣ ಹಾಗೂ ಉತ್ತರಾಖಂಡ್ ನಲ್ಲಿ ಡಿಸೆಂಬರ್ ನಲ್ಲಿ ನಡೆದ ಧರ್ಮ ಸಂಸದ್ ನಲ್ಲಿ ಭಾಗವಹಿಸಿದ್ದವರು ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದಿಸುವ ಭಾಷಣ ಮಾಡಿದ್ದರ ಪ್ರಕರಣಗಳ ಬಗ್ಗೆ ಮೋಹನ್ ಭಾಗ್ವತ್ ಇತ್ತೀಚಿಗೆ ನೀಡಿದ ಭಾಷಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಿಂದುತ್ವವನ್ನು ಅನುಸರಿಸುವವರು ಈ ಹೇಳಿಕೆಗಳನ್ನು ಎಂದಿಗೂ ಒಪ್ಪುವುದಿಲ್ಲ ಎಂದು ಭಾಗವತ್ ಹೇಳಿದ್ದಾರೆ. ನಾನು ಕೆಲವೊಮ್ಮೆ ಕೋಪದಿಂದ ಏನನ್ನಾದರೂ ಹೇಳಿದರೆ ಅದು ಹಿಂದುತ್ವವಲ್ಲ. ಆರ್.ಎಸ್.ಎಸ್. ಅಥವಾ ಹಿಂದುತ್ವವನ್ನು ಅನುಸರಿಸುವವರು ಇದನ್ನು ನಂಬುವುದಿಲ್ಲ ಎಂದು ಲೋಕಮಾತ್ ಮಾಧ್ಯಮ ಗುಂಪು ಆಯೋಜಿಸಿದ್ದ ಉಪನ್ಯಾಸ ಸರಣಿಯಲ್ಲಿ ‘ಹಿಂದುತ್ವ ಮತ್ತು ರಾಷ್ಟ್ರೀಯ ಏಕೀಕರಣ’ ವಿಷಯದ ಕುರಿತು ಮಾತನಾಡಿದ ಭಾಗವತ್ ಹೇಳಿದರು
ಭಾಗವತ್ ಅವರ ಭಾಷಣದ ಮುಖ್ಯಾಂಶಗಳು ಇಲ್ಲಿವೆ
ಸಾವರ್ಕರ್ ಸಹ ಹಿಂದೂ ಸಮುದಾಯ ಒಗ್ಗೂಡಬೇಕು, ಸಂಘಟಿತವಾಗಬೇಕು ಎಂದು ಹೇಳಿದ್ದರೆ, ಅದು ಭಗವದ್ಗೀತೆಯ ಬಗ್ಗೆ ಮಾತಾಡುತ್ತದೆಯೇ ಹೊರತು ಮತ್ತೋರ್ವರನ್ನು ಹಿಂಸಿಸುವ ಬಗ್ಗೆಯಲ್ಲ ಎಂದು ಮೋಹನ್ ಭಾಗವತ್ ತಿಳಿಸಿದ್ದಾರೆ.
ಇನ್ನು ಇದೇ ವೇಳೆ ಭಾರತ ಹಿಂದೂ ರಾಷ್ಟ್ರವಾಗುವ ಹಾದಿಯಲ್ಲಿದೆಯೇ ? ಎಂಬ ಬಗ್ಗೆಯೂ ಮಾತನಾಡಿರುವ ಅವರು, “ಹಿಂದೂ ರಾಷ್ಟ್ರವೆಂಬುದು ಸೃಷ್ಟಿಸುವುದಲ್ಲ. ಯಾರು ಒಪ್ಪಲಿ, ಬಿಡಲಿ ಹಿಂದೂ ರಾಷ್ಟ್ರ ಇದ್ದೇ ಇದೆ” ಎಂದು ಹೇಳಿದ್ದಾರೆ.
ಸಂಘವು ಜನರನ್ನು ವಿಭಜಿಸುವುದರಲ್ಲಿ ಅಲ್ಲ, ಅವರ ಭಿನ್ನಾಭಿಪ್ರಾಯಗಳನ್ನು ದೂರ ಮಾಡುವುದರಲ್ಲಿ ನಂಬಿಕೆ ಇಟ್ಟಿದೆ. ಇದರಿಂದ ಒಗ್ಗಟ್ಟು ಮತ್ತಷ್ಟು ಗಟ್ಟಿಯಾಗುತ್ತದೆ, ನಾವು ಹಿಂದುತ್ವದ ಮೂಲಕ ಈ ಕೆಲಸವನ್ನು ಮಾಡಲು ಬಯಸುತ್ತೇವೆ ಎಂದರು.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಉತ್ತರಾಖಂಡದ ಹರಿದ್ವಾರ ಮತ್ತು ಛತ್ತೀಸ್‌ಗಢದಲ್ಲಿ ನಡೆದ ‘ಧರ್ಮ ಸಂಸದ್’ ವೇಳೆ ಹಿಂದೂ ಮುಖಂಡರು, ಮುಸ್ಲಿಮರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಪ್ರಚೋದನಕಾರಿ ಭಾಷಣಗಳನ್ನು ಭಾಗವಹಿಸಿದ್ದರು ಎಂದು ಆರೋಪಿಸಲಾಗಿದೆ. ಐಪಿಸಿಯ ಸೆಕ್ಷನ್ 153ಎ (ಧರ್ಮ, ಜನಾಂಗ, ಜನ್ಮ ಸ್ಥಳ, ವಾಸಸ್ಥಳ, ಭಾಷೆಯ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಹಲವರ ವಿರುದ್ದ ಎಫ್‌ಐಆರ್ ದಾಖಲಿಸಲಾಗಿದೆ.