ನಿನ್ನೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದ ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್ರ ಅವರ ಸಾವಿನ ಅಂತಿಮ ಕ್ಷಣಗಳ ಬಗ್ಗೆ ಡಾ. ಪ್ರತೀತ್ ಸಮ್ದಾನಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಜೀವ ಹೋಗುವ ಕೆಲವೇ ಕ್ಷಣಕ್ಕೂ ಮುನ್ನ ಲತಾ ಮಂಗೇಶ್ಕರ್ ಮುಖದಲ್ಲಿ ನಗು ಇತ್ತು ಎಂದು ಡಾ. ಪ್ರತೀತ್ ಸಮ್ದಾನಿ ಹೇಳಿದರು.
ಕಳೆದ ಮೂರು ವರ್ಷಗಳಿಂದ ಲತಾ ಮಂಗೇಶ್ಕರ್ರಿಗೆ ಟ್ರೀಟ್ಮೆಂಟ್ ನೀಡುತ್ತಿದ್ದ ಡಾ. ಪ್ರತೀತ್ ಸಮ್ದಾನಿ ಕೋವಿಡ್ ಸೋಂಕು ತಗುಲಿದ್ದ ಸಂದರ್ಭದಲ್ಲಿಯೂ ಲತಾ ದೀದಿಯನ್ನು ತಮ್ಮ ನಿಗಾದಲ್ಲಿಯೇ ಇರಿಸಿಕೊಂಡಿದ್ದರು. ಪ್ರತಿ ಬಾರಿ ಲತಾ ಅವರ ಆರೋಗ್ಯ ಕ್ಷೀಣಿಸಿದಾಗಲೂ ನಾನೇ ಅವರಿಗೆ ಚಿಕಿತ್ಸೆ ನೀಡಿದ್ದೇನೆ. ಆದರೆ ಈ ಬಾರಿ ಮಾತ್ರ ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಲೇ ಇತ್ತು. ನಾವು ನಮ್ಮ ಪ್ರಯತ್ನವನ್ನು ಮುಂದುವರಿಸಿದ್ದರೂ ಸಹ ಅವರನ್ನು ಉಳಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ ಎಂದು ಹೇಳಿದರು.
ಲತಾ ಜಿ ಅವರು ಯಾವ ರೀತಿಯ ಚಿಕಿತ್ಸೆ ಇದ್ದರೂ ಸಹ ಅದು ಅನಿವಾರ್ಯವೆಂದರೆ ಆ ಚಿಕಿತ್ಸೆಗೆ ಒಳಗಾಗುತ್ತಿದ್ದರು. ಅದರಿಂದ ಅವರು ಹಿಂದೆ ಸರಿಯುತ್ತಿರಲಿಲ್ಲ. ನನ್ನ ಜೀವನದುದ್ದಕ್ಕೂ ನಾನು ಲತಾ ಜಿ ಅವರ ನಗುವನ್ನ ಸ್ಮರಿಸುತ್ತೇನೆ. ಆಕೆಯ ಅಂತಿಮ ಕ್ಷಣಗಳಲ್ಲಿಯೂ ಸಹ ಅವರ ಮುಖದಲ್ಲಿ ನಗು ಇತ್ತು. ಕಳೆದ ಕೆಲ ವರ್ಷಗಳಿಂದ ಅವರ ಆರೋಗ್ಯ ಸರಿಯಿಲ್ಲದ ಕಾರಣ ಅವರು ಹೆಚ್ಚಿನ ಜನರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದು ಪ್ರತೀತ್ ಹೇಳಿದ್ದಾರೆ .