ನವದೆಹಲಿ: ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಅಖಾಡ ರಂಗೇರಿದೆ. ದೇಶದ ಗಮನ ಸೆಳೆದಿರುವ ಉತ್ತರ ಪ್ರದೇಶ ಮತ್ತು ಪಂಜಾಬ್ ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಡೆ ಅನುಸರಿಸಿದಂತಿದೆ.
ಉತ್ತರಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಿಎಂ ಯೋಗಿ ಆದಿತ್ಯನಾಥ್ ಅವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವ ಸುಳಿಯನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ.
ವರ್ಚುಯಲ್ ಭಾಷಣದ ಮೂಲಕ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಪ್ರಚಾರ ನಡೆಸಿದ ಪ್ರಧಾನಿ ಮೋದಿ ಅವರು, ಯೋಗಿ ಆದಿತ್ಯನಾಥ್ ಅವರೇ ಮುಂದಿನ ಮುಖ್ಯಮಂತ್ರಿ ಆದರೆ ಕೊರೋನಾದಿಂದ ಆಗಿರುವ ನಷ್ಟವನ್ನು ಸರಿದೂಗಿಸಲಿದ್ದಾರೆ. ಕೊರೋನಾ ಇಲ್ಲದಿದ್ದರೆ ಯೋಗಿ ನೇತೃತ್ವದ ಬಿಜೆಪಿ ಸರ್ಕಾರದಿಂದ ಇನ್ನಷ್ಟು ಕಾರ್ಯಗಳು ನಡೆಯುತ್ತಿದ್ದವು. ಅವರು ಮತ್ತೆ ಮುಖ್ಯಮಂತ್ರಿಯಾದರೆ ಬಡವರಿಗೆ ಮನೆ ನಿರ್ಮಿಸುವ ಕೆಲಸಕ್ಕೆ ವೇಗ ಸಿಗಲಿದೆ ಎಂದು ಹೇಳಿದ್ದಾರೆ. ಪ್ರಧಾನಿಯವರು ಹೀಗೆ ಹೇಳುವ ಮೂಲಕ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎನ್ನುವ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಯೋಗಿ ಆದಿತ್ಯನಾಥ್ ಸಿಎಂ ಸ್ಥಾನದಲ್ಲಿ ಮುಂದುವರೆಯುವ ಸುಳಿವು ನೀಡಿದ್ದಾರೆ.
ಇನ್ನು ಪಂಜಾಬ್ ಕಾಂಗ್ರೆಸ್ ಪಕ್ಷದಲ್ಲಿಯೂ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ವಿಚಾರ ಭಾರಿ ಗೊಂದಲಕ್ಕೆ ಕಾರಣವಾಗಿತ್ತು. ಹಾಲಿ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಮತ್ತು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ನಡುವೆ ಸಿಎಂ ಹುದ್ದೆಗೆ ಭಾರಿ ಪೈಪೋಟಿ ಇತ್ತು. ಜಾಣ ನಡೆ ಅನುಸರಿಸಿದ ರಾಹುಲ್ ಗಾಂಧಿ ಪಕ್ಷದ ಕಾರ್ಯಕರ್ತರಿಗೆ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಮಾಡುವ ಜವಾಬ್ದಾರಿ ನೀಡಿದ್ದರು. ಪಂಜಾಬ್ ಚುನಾವಣೆಯಲ್ಲಿ ದಲಿತ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಹಾಲಿ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಅವರಿಗೆ ಮಣೆ ಹಾಕಿದ್ದು, ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಈ ಹುದ್ದೆಗೆ ಆಕಾಂಕ್ಷಿಯೇ ಪ್ರಬಲ ಆಕಾಂಕ್ಷಿಯಾಗಿದ್ದ ನವಜೋತ್ ಸಿಂಗ್ ಸಿಧು ಅವರಿಗೆ ಬಿಗ್ ಶಾಕ್ ನೀಡಿದೆ.
ಈ ಮೂಲಕ ಉತ್ತರ ಪ್ರದೇಶ ಮತ್ತು ಪಂಜಾಬ್ ನಲ್ಲಿ ಹಾಲಿ ಮುಖ್ಯಮಂತ್ರಿಗಳಿಗೆ ಮಣೆ ಹಾಕಿದ ಬಿಜೆಪಿ, ಕಾಂಗ್ರೆಸ್ ಒಂದೇ ನಡೆ ಅನುಸರಿಸಿ ಸಿಎಂ ಹುದ್ದೆ ಆಕಾಂಕ್ಷಿಗಳಾಗಿದ್ದವರಿಗೆ ಶಾಕ್ ನೀಡಿ ಗೊಂದಲಕ್ಕೆ ತೆರೆ ಎಳೆದಿವೆ ಎನ್ನಲಾಗಿದೆ.