ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರ ಸೂಪರ್ ಬಿಗ್ ವಿಹಾರ ನೌಕೆ ಮತ್ತೆ ಸುದ್ದಿಯಲ್ಲಿದ್ದು, ಸಂಚಲನ ಮೂಡಿಸುತ್ತಿದೆ. ಜೊತೆಗೆ ಹಲವರ ಕೆಂಗಣ್ಣಿಗೂ ಗುರಿಯಾಗಿದೆ,
ಹೌದು, ಜೆಫ್ ಬೆಜೋಸ್ ಅವರ 417 ಅಡಿ ಉದ್ದದ ನೌಕಾಯಾನವು ಭಾರಿ ದೊಡ್ಡದಾಗಿದೆ. ಅವರ ವಿಹಾರ ನೌಕೆಯು ಎಷ್ಟು ದೊಡ್ಡದಾಗಿದೆ ಎಂದರೆ ಐತಿಹಾಸಿಕ ಡಚ್ ಸೇತುವೆಯು ಹಾದುಹೋಗಲು ಅದನ್ನು ಕೆಡವಲಾಗುತ್ತಿದೆ. ರೋಟರ್ಡ್ಯಾಮ್ನಲ್ಲಿರುವ ಈ ಐತಿಹಾಸಿಕ ಸೇತುವೆಯನ್ನು ತಾತ್ಕಾಲಿಕವಾಗಿ ತೆಗೆಯಲಾಗುತ್ತಿದೆ. ದಿ ಕೊನಿಂಗ್ಶವೆನ್ಬ್ರಗ್ ಎಂದು ಕರೆಯಲ್ಪಡುವ ಈ ಸೇತುವೆಯು 1878ಕ್ಕಿಂತಲೂ ಹಿಂದಿನದಾಗಿದೆ. ಎರಡನೆಯ ಮಹಾಯುದ್ಧದ ಸಮಯದಲ್ಲಿ ಜರ್ಮನ್ ಬಾಂಬ್ ದಾಳಿಯಿಂದ ಹಾನಿಗೊಳಗಾದ ನಂತರ ಅದನ್ನು ಮರುನಿರ್ಮಿಸಲಾಯಿತು.
ವರದಿಯ ಪ್ರಕಾರ, ಈ ನಿರ್ಧಾರವು ನೆದರ್ಲ್ಯಾಂಡ್ಸ್ನಲ್ಲಿ ಹಲವರ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಹೇಳಲಾಗಿದೆ. 2017ರಲ್ಲಿ ಪ್ರಮುಖ ನವೀಕರಣದ ನಂತರ ಮತ್ತೊಮ್ಮೆ ಸೇತುವೆಯನ್ನು ಕೆಡವುದಿಲ್ಲ ಎಂದು ಸ್ಥಳೀಯ ಕೌನ್ಸಿಲ್ ಭರವಸೆ ನೀಡಿತ್ತು.
ಡಚ್ ಶಿಪ್ಯಾರ್ಡ್ನಲ್ಲಿ ದೋಣಿ ನಿರ್ಮಾಣದಿಂದ ರಚಿಸಲಾದ ಆರ್ಥಿಕ ಪ್ರಯೋಜನಗಳು ಮತ್ತು ಉದ್ಯೋಗಗಳ ಕುರಿತಾಗಿ ಕೌನ್ಸಿಲ್ ಜನರಿಗೆ ವಿವರಿಸಿದೆ. ಹಾಗೆಯೇ ಸೇತುವೆಯನ್ನು ಅದರ ಪ್ರಸ್ತುತ ಆಕಾರಕ್ಕೆ ಮರುಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದೆ.
ಇದು ಸಮುದ್ರಕ್ಕೆ ಏಕೈಕ ಮಾರ್ಗವಾಗಿದ್ದು, ಬಿಲಿಯನೇರ್ ಬೆಜೋಸ್ ಕಾರ್ಯಾಚರಣೆಯ ಬಿಲ್ ಅನ್ನು ಪಾವತಿಸುತ್ತಾರೆ ಎಂದು ರೋಟರ್ಡ್ಯಾಮ್ನ ಮೇಯರ್ನ ವಕ್ತಾರರು ಹೇಳಿದ್ದಾರೆ. 40 ಮೀಟರ್ (130 ಅಡಿ) ಎತ್ತರದ ದೋಣಿಗೆ ಸಾಕಷ್ಟು ಜಾಗ ನೀಡುವುದಕ್ಕಾಗಿ ಮಧ್ಯದ ಭಾಗವನ್ನು ತೆಗೆದುಹಾಕಲಾಗುತ್ತದೆ ಎಂದು ವರದಿ ತಿಳಿಸಿದೆ. ಈ ಪ್ರಕ್ರಿಯೆಯು ಕೆಲವು ವಾರಗಳನ್ನು ತೆಗೆದುಕೊಳ್ಳುತ್ತದೆ. ಈ ಬೇಸಿಗೆಯಲ್ಲಿ ಇದರ ಕೆಲಸ ನಡೆಯುವ ನಿರೀಕ್ಷೆಯಿದೆ.