
ವಿಡಿಯೋ ವೈರಲ್ ಬೆನ್ನಲ್ಲೇ ಆನೆಗಳು ದಾಟುವುದಕ್ಕಾಗಿ ಸುರಕ್ಷಿತ ಮಾರ್ಗವನ್ನು ಒದಗಿಸಲು ರೈಲ್ವೆ ಸಚಿವಾಲಯವು ತ್ವರಿತ ಕ್ರಮ ಕಗೊಂಡಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಆನೆಗಳ ಹಿಂಡು ರೈಲ್ವೆ ಹಳಿಗಳ ಗೋಡೆಗಳನ್ನು ದಾಟಲು ಹೆಣಗಾಡುತ್ತಿರುವುದನ್ನು ನೋಡಬಹುದು. ಅವುಗಳು ಇನ್ನೊಂದು ಬದಿಯಲ್ಲಿರುವ ಅರಣ್ಯವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದು, ಆದರೆ, ಅಲ್ಲಿ ಗೋಡೆಯ ಬೇಲಿಯಿರುವುದರಿಂದ ದಾಟಲು ಸಾಧ್ಯವಾಗಿಲ್ಲ.
ಕೆಲವು ಸೆಕೆಂಡುಗಳ ನಂತರ, ಗಜಪಡೆ ಹಳಿಗಳ ಮೇಲೆ ನಡೆದುಕೊಂಡು ಹೋಗುವುದನ್ನು ನೋಡಬಹುದು. ಇದರಿಂದಾಗಿ ಆನೆಗಳು ಕಾಡಿನೊಳಗೆ ಪ್ರವೇಶಿಸಬಹುದು. ಅದೃಷ್ಟವಶಾತ್, ಆ ಮಾರ್ಗದಲ್ಲಿ ಯಾವುದೇ ಒಳಬರುವ ರೈಲುಗಳು ಇರಲಿಲ್ಲ. ಹೀಗಾಗಿ ಆನೆಗಳು ಪ್ರಾಣಾಪಾಯದಿಂದ ಪಾರಾಗಿವೆ.
ವಿಡಿಯೋವನ್ನು ಹಂಚಿಕೊಂಡ ಸುಪ್ರಿಯಾ ಸಾಹು ಅವರು ಇದನ್ನು ಅತ್ಯಂತ ದುಃಖಕರವೆಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಆನೆಗಳ ಹಿಂಡು ಅಪಾಯದಿಂದ ತುಂಬಿದ ರೈಲ್ವೇ ಹಳಿಗಳ ಮೂಲಕ ತಮ್ಮ ದಾರಿಯನ್ನು ಹಿಡಿದಿರುವುದು ನೋಡಿದ್ರೆ ಸಂಕಟವಾಗುತ್ತದೆ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಟ್ವಿಟ್ಟರ್ ನಲ್ಲಿ ಇದನ್ನು ಪೋಸ್ಟ್ ಮಾಡಿದ ನಂತರ, ವಿಡಿಯೋ ಸುಮಾರು 90 ಸಾವಿರ ವೀಕ್ಷಣೆಗಳನ್ನು ಗಳಿಸಿದೆ. ಇದೀಗ ಪ್ರಾಣಿಗಳ ಸುರಕ್ಷಿತ ಮಾರ್ಗಕ್ಕಾಗಿ ಟ್ರ್ಯಾಕ್‌ಗಳ ಪಕ್ಕದಲ್ಲಿರುವ ಗೋಡೆಗಳನ್ನು ಕೆಡವುತ್ತಿರುವುದನ್ನು ಇನ್ನೊಂದು ವಿಡಿಯೋದಲ್ಲಿ ನೋಡಬಹುದು. ಸುಪ್ರಿಯಾ ಸಾಹು ಅವರ ವನ್ಯಜೀವಿ ಕಾಳಜಿ ಬಗ್ಗೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಹಾಗೂ ರೈಲ್ವೆ ಸಚಿವಾಲಯದ ತ್ವರಿತ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.