ಬೆಂಗಳೂರು: ಮಾಜಿ ಹಾಗೂ ಹಾಲಿ ಶಾಸಕರ ನಡುವಿನ ಆಣೆ-ಪ್ರಮಾಣ ರಾಜಕೀಯ ಇದೀಗ ತಾರಕಕ್ಕೇರಿದ್ದು, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾಡಿರುವ ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪಕ್ಕೆ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲು ಸಿದ್ಧ ಎಂದು ಶಾಸಕ ಹರತಾಳು ಹಾಲಪ್ಪ ಪಂಥಾಹ್ವಾನ ನೀಡಿದ್ದಾರೆ.
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಶಾಸಕ ಹರತಾಳು ಹಾಲಪ್ಪ ವಿರುದ್ಧ ಮರಳು ಲಾರಿಗಳಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಆರೋಪಿಸಿದ್ದರು. ಸುಳ್ಳು ಎಂದಾದರೆ ಈ ಬಗ್ಗೆ ಫೆ.10ರಂದು ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದರು.
ರಾಮಮಂದಿರ ಕುರಿತ ಓವೈಸಿ ಹೇಳಿಕೆಗಳಿಂದ ಕ್ರೋಧಗೊಂಡಿದ್ದ ದಾಳಿಕೋರರು…! ಆರೋಪಿ ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗ
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಹರತಾಳು ಹಾಲಪ್ಪ, ನಾನಾಗಲಿ, ನಮ್ಮ ಕುಟುಂಬವಾಗಲಿ ಮರಳು ಗಣಿಗಾರಿಕೆ ಮಾಡುವವರಿಂದ, ಲಾರಿಗಳಿಂದ ಯಾವುದೆ ರೀತಿ ಹಣ ಪಡೆದಿಲ್ಲ. ನನ್ನ ವಿರುದ್ಧದ ಆರೋಪಗಳು ಸುಳ್ಳು. ಮರಳು ಲಾರಿಗಳಿಂದ ನಾನು ಯಾವುದೇ ರೀತಿ ಹಣ ಪಡೆದಿಲ್ಲ ಎಂದು ಧರ್ಮಸ್ಥಳ ಮಂಜುನಾಥ ಸನ್ನಿಧಿಯಲ್ಲಿ ಪ್ರಮಾಣ ಮಾಡಲು ಸಿದ್ಧ ಎಂದಿದ್ದಾರೆ.
ಆದರೆ ಫೆಬ್ರವರಿ 10ರಂದು ಬರಲು ಸಾಧ್ಯವಿಲ್ಲ ಹಾಗಾಗಿ ಫೆ.13ರಂದು ಧರ್ಮಸ್ಥಳಕ್ಕೆ ಬಂದು ಆಣೆ-ಪ್ರಮಾಣ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಒಟ್ಟಾರೆ ಚುನಾವಣೆಗೆ ಒಂದು ವರ್ಷ ಬಾಕಿಯಿರುವಾಗಲೇ ಆಣೆ-ಪ್ರಮಾಣ ರಾಜಕೀಯ ಜೋರಾಗಿದ್ದು, ಫೆ.13ರಕ್ಕೆ ಯಾವ ತಿರುವು ಪಡೆದುಕೊಳ್ಳಲಿದೆ ಕಾದು ನೋಡಬೇಕಿದೆ.