ಬೆಂಗಳೂರು: ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಸಮವಸ್ತ್ರ ಸಂಹಿತೆ ಪಾಲನೆ ಮಾಡುವಂತೆ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸೂಚಿಸಿದ್ದಾರೆ.
ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವರು, ಹಿಜಾಬ್, ಕೇಸರಿ ಶಾಲು ವಿವಾದ ಹೈಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ. ಹೀಗಾಗಿ ಸಭೆಯಲ್ಲಿ ಹೊಸ ನಿರ್ಧಾರ ಕೈಗೊಂಡಿಲ್ಲ. ಸಿಎಂ ಬೊಮ್ಮಾಯಿ ಎಜಿ ಅವರಿಂದ ಮಾಹಿತಿ ಪಡೆದಿದ್ದಾರೆ. ಕೋರ್ಟ್ ಗೆ ಸರ್ಕಾರದ ನಿಲುವು ತಿಳಿಸುವಂತೆ ಸೂಚಿಸಲಾಗಿದೆ ಎಂದರು.
ಹೈಕೋರ್ಟ್ ತೀರ್ಪು ಬರುವವರೆಗೆ ವಿದ್ಯಾರ್ಥಿಗಳು ಈಗಿರುವ ಸಮವಸ್ತ್ರ ಸಂಹಿತೆ ಪಾಲನೆ ಮಾಡಬೇಕು. ಕಾಲೇಜಿಗೆ ಪ್ರವೇಶ ಪಡೆಯುವ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳು ಶಾಲಾ ನಿಯಮ ಹಾಗೂ ಸಮವಸ್ತ್ರ ಸಂಹಿತೆ ಪಾಲಿಸುವ ಬಗ್ಗೆ ಸಹಿ ಮಾಡಿದ್ದಾರೆ. ಕಳೆದ ಜನವರಿ ವರೆಗೂ ವಿದ್ಯಾರ್ಥಿಗಳು ಶಾಲಾ ನಿಯಮಾನುಸಾರವೇ ತರಗತಿಗೆ ಬರುತ್ತಿದ್ದರು. ಆದರೆ ಹಿಜಾಬ್ ವಿಚಾರವಾಗಿ ಯಾರದೋ ಕೈವಾಡದಿಂದಾಗಿ ಕಳೆದ ಜನವರಿಂದ ವಿವಾದ ಆರಂಭವಾಗಿದೆ ಎಂದರು.
ಸಮವಸ್ತ್ರ ಕಡ್ಡಾಯ ಎಂಬುದಿಲ್ಲ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿ.ಸಿ.ನಾಗೇಶ್, 2017-18ರಿಂದಲೂ ಒಂದು ನಿಯಮ ಜಾರಿ ಮಾಡಲಾಗಿದೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿಯೂ ಯೂನಿಫಾರ್ಮ್ ರೂಲ್ ಇದೆ. ಇದು ಕೇವಲ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಯಾಗಿರುವುದಲ್ಲ. ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಕಾನೂನಿನ ಬಗ್ಗೆ ನನಗಿಂತ ಚನ್ನಾಗಿ ಸಿದ್ದರಾಮಯ್ಯನವರಿಗೆ ಗೊತ್ತಿದೆ ಹೀಗಾಗಿ ಅರಿತು ಮಾತನಾಡಲಿ. ಅನಗತ್ಯವಾಗಿ ಮಕ್ಕಳ ದಾರಿ ತಪ್ಪಿಸಲು ಆರೋಪಗಳನ್ನು ಮಾಡುವುದು ಶೋಭೆಯಲ್ಲ ಎಂದು ಹೇಳಿದರು.