ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಸದ್ಯ ತಮ್ಮ ಕಂಪನಿಯ ಹೆಸರನ್ನು ‘ ಮೆಟಾ’ ಎಂದು ಬದಲಾಯಿಸಿಕೊಂಡಿದ್ದಾರೆ. ಅಮೆರಿಕದ ಷೇರು ಮಾರುಕಟ್ಟೆಯಲ್ಲಿನ ತಲ್ಲಣದಿಂದಾಗಿ ಗುರುವಾರದಂದು ಒಂದೇ ದಿನದಲ್ಲಿ ಮೆಟಾ ಕಂಪನಿಯ ಷೇರು ಮೌಲ್ಯ 26% ಕುಸಿದಿದೆ.
ಅಂದರೆ, ಜುಕರ್ಬರ್ಗ್ಗೆ ಒಟ್ಟು 2.16 ಲಕ್ಷ ಕೋಟಿ ರೂ. ನಷ್ಟವಾಗಿದೆ. ವಿಶ್ವದಲ್ಲೇ ಅತ್ಯಂತ ಜನಪ್ರಿಯ ಮತ್ತು ಹೆಚ್ಚು ಗ್ರಾಹಕರನ್ನು ಹೊಂದಿರುವ ಮೆಟಾ ಒಡೆತನದ ಸಾಮಾಜಿಕ ಜಾಲತಾಣ ’’ಫೇಸ್ಬುಕ್’’ನಲ್ಲಿ ಜುಕರ್ಬರ್ಗ್ವೊಬ್ಬರೇ ಶೇ.12.8 ರಷ್ಟು ಷೇರುಗಳ ಒಡೆತನ ಹೊಂದಿದ್ದಾರೆ.
ಫೇಸ್ಬುಕ್ ಒಡೆತನ ಮೆಟಾದ ಷೇರುಗಳ ಮೌಲ್ಯ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕುಸಿಯಲು ಕಾರಣ ಪ್ರತಿಸ್ಪರ್ಧಿಗಳಾದ ಟಿಕ್ಟಾಕ್ ಹಾಗೂ ಯೂಟ್ಯೂಬ್ ಬಲಗೊಳ್ಳುತ್ತಿರುವುದು ಎನ್ನಲಾಗಿದೆ. ಜತೆಗೆ ಆ್ಯಪಲ್ ಕಂಪನಿಯ ಖಾಸಗಿ ನೀತಿಗಳಲ್ಲಿ ಮಹತ್ತರ ಬದಲಾವಣೆಯೂ ಕಾರಣ ಎಂದು ಷೇರುಪೇಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ದೊಡ್ಡ ಮೊತ್ತದ ಆಸ್ತಿ ನಷ್ಟವಾದ ಹಿನ್ನೆಲೆಯಲ್ಲಿ ಜುಕರ್ಬರ್ಗ್, ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ12ನೇ ಸ್ಥಾನಕ್ಕೆ ಕುಸಿದಿದ್ದಾರೆ. ಭಾರತೀಯ ಉದ್ಯಮಿಗಳಾದ ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಅವರು ಜುಕರ್ಬರ್ಗ್ನನ್ನು ಹಿಂದಿಕ್ಕಿದ್ದಾರೆ.